ಉಡುಪಿ: ನಾವು ನಮ್ಮ ಸುತ್ತಮತ್ತ ಇರುವವರಿಗೆ ಮಾಡುವ ಪುಟ್ಟ ಸಹಾಯ ಅವರಿಗಾಗಿ ನಾವು ನೀಡುವ ಒಂದಿಷ್ಟು ಸಮಯ ಕೂಡ ಸಮಾಜ ಸೇವೆ ಎಂದು ಪರಿಗಣಿಸಲ್ಪಡುತ್ತದೆ. ಜೀವನಾಧಾರಕ್ಕಾಗಿ ವೃತ್ತಿನಿರತ ಉದ್ಯೋಗಿಗಳೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಎದುರಾಗುವ ಗ್ರಾಹಕ ಬಂಧುಗಳನ್ನು ಆಪ್ತವಾಗಿ ವಿಚಾರಿಸಿಕೊಂಡು ನಗು ನಗುತ್ತಾ ಕರ್ತವ್ಯ ನಿರ್ವಹಿಸಿದರೆ ಅದೇ ಒಂದು ದೊಡ್ಡ ಸಮಾಜ ಸೇವೆ ಎಂದು ಖ್ಯಾತ ಹಾಸ್ಯ ಭಾಷಣಗಾರರಾದ ಸಂಧ್ಯಾ ಶೆಣೈ ಉಡುಪಿ ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗದ ವತಿಯಿಂದ ಉಡುಪಿ ಪ್ರಧಾನ ಅಂಚೆ ಕಚೇರಿಯ ಮಹಡಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೀವನ ಮೌಲ್ಯಗಳು ಮತ್ತು ಹಾಸ್ಯ ಎಂಬ ವಿಷಯವಾಗಿ ಮಾತನಾಡಿದ ಅವರು, ಪ್ರತಿಯೋರ್ವನ ಜೀವನದಲ್ಲಿ ಕರ್ತವ್ಯ ಮತ್ತು ಜೀವನ ಮೌಲ್ಯಗಳು ಮಹತ್ತರ ಪಾತ್ರ ವಹಿಸುತ್ತವೆ. ಹಾಗಾಗಿ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ನಗುಮೊಗದಿಂದ ನಿರ್ವಹಿಸಬೇಕು. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ವಹಿಸಿದ್ದರು. ಅಂಚೆ ಇಲಾಖೆಯ ನಿವೃತ್ತ ಮಹಿಳಾ ಉದ್ಯೋಗಿ ಸುಲೋಚನಾ ಭಟ್ ರವರನ್ನು ಗೌರವಿಸಲಾಯಿತು. ಮಹಿಳಾ ಸಹೋದ್ಯೋಗಿಗಳಿಗೆ ವಿವಿಧ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಗೀತ ಗಾಯನ ನಡೆಸಿಕೊಟ್ಟರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಗುರುಪ್ರಸಾದ್ ಉಪಸ್ಥಿತರಿದ್ದರು. ಸವಿತಾ ಶೆಟ್ಟಿಗಾರ್, ಅರ್ಚನಾ ಜಂಗಮ, ಶಾಲಿನಿ ದೇವಾಡಿಗ ಪ್ರಾರ್ಥಿಸಿ, ಭಾರತಿ ನಾಯಕ್ ಪ್ರಸ್ತಾವನೆ ನಡೆಸಿಕೊಟ್ಟರು. ಲೀಲಾವತಿ ತಂತ್ರಿ ಧನ್ಯವಾದವಿತ್ತರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.