ಉಡುಪಿ, ಆ.10: ಕಾರ್ಕಳ ತಾಲೂಕು ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಶಿಕ್ಷಣ ಇಲಾಖೆಯ ಚೆಸ್ ಪಂದ್ಯಾಟವು ರೆಂಜಾಳ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಆತಿಥ್ಯದಲ್ಲಿ ರೆಂಜಾಳದಲ್ಲಿ ನಡೆಯಿತು. ದೀಪ ಬೆಳಗಿಸಿ ಈ ಪಂದ್ಯಾಟವನ್ನು ಉದ್ಘಾಟನೆ ಮಾಡಿದ ರೆಂಜಾಳದ ಸಂಸ್ಕೃತಿ ಸಿಂಚನದ ಸಂಚಾಲಕರಾದ ರಾಜೇಶ್ ರೆಂಜಾಳ ಅವರು ಮಾತನಾಡಿ, ಚದುರಂಗವು ಭಾರತದಲ್ಲಿಯೇ ಆರಂಭವಾದ ಆಟ. ಅದು ಭಾರತದ ಎಲ್ಲ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅತ್ಯಂತ ಕಿರಿಯ ಪ್ರಾಯದ ಚೆಸ್ ಗ್ರಾನ್ ಮಾಸ್ಟರಗಳು ಮೂಡಿಬರುತ್ತಿರುವುದು ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ವಹಿಸಿದ್ದರು. ತಾಲೂಕು ಕ್ರೀಡಾ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಅವರು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು. ಸ್ಥಳೀಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಮಂಜೊಟ್ಟು ರಮೇಶ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಸಂತೋಷ್ ಶೆಟ್ಟಿ, ಉಮೇಶ್ ಆಚಾರ್ಯ, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶೋಭಾ ಮತ್ತು ಪ್ರಶಾಂತ್ ಹೆಗ್ಡೆ, ಸರಕಾರಿ ನೌಕರರ ಸಂಘದ ರಾ. ಪರಿಷದ್ ಸದಸ್ಯರಾದ ರಾಜಾರಾಮ್ ಶೆಟ್ಟಿ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕಿ ಸ್ವರ್ಣಲತಾ ಸ್ವಾಗತಿಸಿದರು. ಶಿಕ್ಷಕ ವಿನಾಯಕ ನಾಯಕ್ ನಿರೂಪಿಸಿದರು. ಶಿಕ್ಷಕಿ ವಿಶಾಲಾಕ್ಷಿ ವಂದಿಸಿದರು. ಸಮಾರೋಪದಲ್ಲಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಣೆ ಮಾಡಿದರು.