ಉಡುಪಿ, ಆ.4: ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಾದ ಪ್ರಧಾನಮಂತ್ರಿ ವಿಶ್ವಕರ್ಮ, ಸೂರ್ಯ ಘರ್ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳನ್ನು ಸಮರ್ಪಕವಾಗಿ ಪ್ರತಿಷತಃ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ವಿಶ್ವಕರ್ಮ ಯೋಜನೆ ಮತ್ತು ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತವೆ. ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವುಗಳ ಫಲಾನುಭವಿಗಳನ್ನಾಗಿಸುವ ಕಾರ್ಯವನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಿದಾಗ ಮಾತ್ರ ಅವು ಜನರಿಗೆ ತಲುಪುತ್ತವೆ ಎಂದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಣಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಮಾಡಿ, ಉತ್ತಮ ಇಳುವರಿ ಪಡೆಯುವುದರೊಂದಿಗೆ ಹೆಚ್ಚಿನ ಆರ್ಥಿಕ ಲಾಭ ಪಡೆಯಬೇಕು ಎಂಬ ಉದ್ದೇಶವಿದೆ. ಜಿಲ್ಲೆಯಲ್ಲಿ 1,79,452 ಜನ ಅರ್ಜಿ ಸಲ್ಲಿಸಿದ್ದು, 162344 ರೈತರ ಖಾತೆಗಳಿಗೆ ಕಂತಿನ ಹಣ ನೇರವಾಗಿ ಜಮಾ ಆಗುತ್ತಿವೆ. ಬಾಕಿ ಉಳಿದ 17,108 ಅರ್ಹ ಜನರಿಗೂ ಈ ಯೋಜನೆಯ ಲಾಭ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಾಕಿ ಉಳಿದ 17,108 ಜನ ರೈತರಿಗೆ ಕೃಷಿ ಸಖಿಯರ ಮೂಲಕ ಅವರ ದಾಖಲಾತಿ ಸೇರಿದಂತೆ ಮತ್ತಿತರ ವಿವರಗಳನ್ನು ಕ್ರೋಢಿಕರಿಸಿ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಫಲಾನುಭವಿಗಳನ್ನಾಗಿಸಬೇಕು. ಈಗಾಗಲೇ ಈ ಯೋಜನೆಯಡಿ ಕಂತುಗಳನ್ನು ನೀಡುತ್ತಿರುವ ಆರ್ಥಿಕ ನೆರವಿನ ಮಾಹಿತಿಗಳನ್ನು ಅವರುಗಳಿಗೆ ಕಳುಹಿಸಬೇಕು ಎಂದರು. ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಮಾಡಿಸುವ ಕಾಲಾವಧಿಯನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸಲು ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ರೈತ ಬಾಂಧವರು ಬೆಳೆ ವಿಮೆ ಮಾಡಿಸುವುದರೊಂದಿಗೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ಕೊಡಬೇಕು ಎಂದರು.
ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕರ ಕುಶಲ ಕಲೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರುವುದರೊಂದಿಗೆ ಅವರುಗಳಿಗೆ ಕೌಶಲ್ಯದ ಉನ್ನತೀಕರಣವನ್ನು, ಆಧುನಿಕ ಸಾಧನಗಳಿಗೆ ಬೆಂಬಲ, ಆರ್ಥಿಕ ನೆರವು ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶವಾಗಿದೆ. ಅರ್ಹರು ಈ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೆ ವಿಶ್ವಕರ್ಮ ಯೋಜನೆಯಡಿ 14,756 ಜನರು ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಸಂಸ್ಥೆಗಳು 12,394 ಜನರ ಅರ್ಜಿಗಳನ್ನು ಶಿಫಾರಸ್ಸು ಮಾಡಿ ಜಿಲ್ಲಾ ಸಮಿತಿಗೆ ವರ್ಗಾಯಿಸಲಾಗಿದೆ. ಜಿಲ್ಲಾ ಸಮಿತಿಯು 7233 ಅರ್ಜಿಗಳನ್ನು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದ್ದು, ಅವುಗಳಲ್ಲಿ 6324 ಅರ್ಜಿಗಳು ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿವೆ. ಬಾಕಿ ಉಳಿದ ಅರ್ಜಿಗಳನ್ನು ಪರಿಶೀಲಿಸಿ, ಕೂಡಲೇ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಬೇಕೆಂದು ಸೂಚನೆ ನೀಡಿದರು. ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿರುವ ಅರ್ಹ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಆದಷ್ಟು ವಿಳಂಬವಿಲ್ಲದೇ ನೀಡಬೇಕು. ಶೇ. 5 ರ ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಬೇಕು ಎಂದರು. ವಾಣಿಜ್ಯ ಬ್ಯಾಂಕುಗಳು ಫಲಾನುಭವಿಗಳಿಗೆ ಒಂದು ಲಕ್ಷ ರೂ. ವರೆಗೆ ಆರ್ಥಿಕ ನೆರವನ್ನು ಕಲ್ಪಿಸುವಾಗ ಶೇ. 12 ರಷ್ಟು ಬಡ್ಡಿ ದರವನ್ನು ನೀಡಬೇಕೆಂಬ ಷರತ್ತು ವಿಧಿಸಲಾಗುತ್ತಿದೆ. ಫಲಾನುಭವಿಗಳೂ ಶೇ. 5 ರ ಬಡ್ಡಿ ನೀಡಿದರೆ, ಕೇಂದ್ರ ಸರ್ಕಾರ ಸಹಾಯಧನವನ್ನು ಶೇ. 7 ರಷ್ಟು ನೀಡುತ್ತದೆ. ಈ ಯೋಜನೆಯ ಆರ್ಥಿಕ ನೆರವು ಒದಗಿಸುವ ಸಂದರ್ಭದಲ್ಲಿ 500 ರೂ. ಮೊತ್ತದ ಠಸ್ಸೆ ಪೇಪರ್‌ನಲ್ಲಿ ಕರಾರು ಮಾಡಿಕೊಟ್ಟರೆ ಸಾಕು. ಆದರೆ ಕೆಲವು ಬ್ಯಾಂಕುಗಳಲ್ಲಿ 2500 ರೂ. ಮೊತ್ತ ಪಡೆಯುವ ಬಗ್ಗೆ ದೂರುಗಳು ಕೇಳೀ ಬರುತ್ತಿವೆ. ಮಾರ್ಗದರ್ಶಿ
ಬ್ಯಾಂಕಿನವರು ಈ ಬಗ್ಗೆ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಬೇಕು ಎಂದರು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆಯ ಮೇಲ್ಛಾವಣಿಯಲ್ಲಿ 300 ಯೂನಿಟ್‌ಗಳವರೆಗೂ ಸೋಲಾರ್ ವಿದ್ಯುತ್‌ಚ್ಛಕ್ತಿ ಉತ್ಪಾದನಾ ಸಾಧನಗಳನ್ನು ಸಹಾಯಧನದೊಂದಿಗೆ ಅಳವಡಿಸಿ ಉಚಿತ ವಿದ್ಯುತ್ ಪಡೆಯಲು ಜಾರಿಗೆ ತಂದಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಇದರ ಪ್ರಯೋಜನ ಪಡೆಯುವಂತೆ ಮಾಡಬೇಕು ಎಂದರು. ಈ ಎಲ್ಲಾ ಯೋಜನೆಗಳು ಜನರಿಗೆ ತಲುಪಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ, ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ಆಯೋಜನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಜಂಟಿ ನಿರ್ದೇಶಕಿ ಸೀತಾ, ಮೆಸ್ಕಾಂ ಇಂಜಿನಿಯರ್ ಉಪಾಧ್ಯಾಯ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.