ಉಡುಪಿ, ಆ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಲ (ರಿ) ಕೊಡವೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಡಾ. ಮಹಾಂತೇಶ ಶಿವಯೋಗಿಗಳ ಜನ್ಮದಿನ-ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವು ನಡೆಯಿತು. ಮಲ್ಪೆಯ ವೈದ್ಯಾಧಿಕಾರಿ ಡಾ. ಜೇಸ್ಮಾ ಸ್ಟೇಲ್ಲಾ ಪಿಕಾರ್ಡೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಆರೋಗ್ಯವಂತ ಮಹಿಳೆಯಿಂದ ಇಡೀ ಕುಟುಂಬ ಕ್ಷೇಮವಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ವಿವಿಧ ಕಾರಣಗಳಿಂದಾಗಿ ಮನುಷ್ಯ ತಂಬಾಕು ಸೇರಿದಂತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾನೆ. ಮಾದಕ ವಸ್ತುಗಳ ಸೇವನೆಯು ಕೇವಲ ಜೀವನ ನಷ್ಟವಲ್ಲದೇ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ, ಎಂದ ಅವರು, ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಒಳಗಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವುದು ವಿಷಾಧನೀಯ. ಪೋಷಕರು ಈ ಬಗ್ಗೆ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಸಾರ್ವಜನಿಕರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಪ್ರತಿಯೊಬ್ಬರೂ ಉಚಿತ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಹೊಂದುವಂತೆ ತಿಳಿಸಿದರು.
ಸುಮನಸಾ ಕೊಡವೂರಿನ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ. ವೈಭವ್, ಮಣಿಪಾಲ ಕೆ.ಎಂ.ಸಿ ಸಮುದಾಯ ವೈದ್ಯಕೀಯ ವಿಭಾಗದ ಡಾ.ತಪಸ್, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಸುಯೋಗ್, ಕೊಡವೂರು ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮೈತ್ರಿ, ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ನಿರೂಪಿಸಿ, ಎಂ.ಎಸ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 80 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ರಕ್ತದೊತ್ತಡ, ಮಧುಮೇಹ, ಬಿ.ಪಿ, ಗರ್ಭಕಂಠ ಕ್ಯಾನ್ಸರ್ ತಪಾಸಣೆ, ನೇತ್ರ ತಪಾಸಣೆ ನಡೆಸಲಾಯಿತು.