ಉಡುಪಿ, ಜು.26: ಉಡುಪಿ ನಗರಸಭೆಯ ವತಿಯಿಂದ ಡೆಂಗ್ಯೂ, ಚಿಕನ್ ಗುನ್ಯ, ಮಲೇರಿಯಾ, ಡಯೇರಿಯಾ ಮತ್ತು ಫೈಲೇರಿಯಾ ಮುಂತಾದ ಸಾಂಕ್ರಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ಕಾರ್ಯಗಾರ ಮತ್ತು ಡ್ರೈ ಡೇ(ಒಣದಿನ)ಯನ್ನು ಉಡುಪಿಯ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಡೆಂಗ್ಯೂ ಮುಂಜಾಗೃತಾ ಕ್ರಮವಾಗಿ ಅಪಾರ್ಟ್ಮೆಂಟ್, ಹೋಟೆಲ್, ಅಂಗಡಿಗಳು, ಗೂಡಂಗಡಿಗಳು, ಫಾಸ್ಟ್ ಫುಡ್ ಅಂಗಡಿಗಳು ಸೇರಿದಂತೆ ಮತ್ತಿತರ ಅಂಗಡಿಗಳ ಸರ್ವೆ ನಡೆಸಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಸ್ವಚ್ಛತೆಯನ್ನು ಕಾಪಾಡದ 171 ಅಂಗಡಿಗಳಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ ರೂ. 7200 ದಂಡ ವಸೂಲಿ ಮಾಡಲಾಗಿರುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗೃತೆ ವಹಿಸಿ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆಯನ್ನು ವಿತರಿಸಿ ಶಾಲೆಯ ಸುತ್ತ ಕೀಟನಾಶಕವನ್ನು ಸಿಂಪಡಿಸಲಾಯಿತು. ಶಾಲೆಯ ಮುಖ್ಯೋಪಾದ್ಯಾಯರು, ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್., ಆರೋಗ್ಯ ನಿರೀಕ್ಷರು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.