ಉಡುಪಿ, ಜು.24: 36 ವರ್ಷಗಳ ನಂತರ ಭಂಡಾರಿಕೆರಿ ಶ್ರೀಪಾದರು ತಮ್ಮ ಆತ್ಮೀಯರಾದ ಪರ್ಯಾಯ ಶ್ರೀಪಾದರಾದ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಚಾತುರ್ಮಾಸ ವೃತ ಸ್ವೀಕರಿಸುವ ಪ್ರಯುಕ್ತ ಉಡುಪಿ ಕ್ಷೇತ್ರಕ್ಕೆ ಬುಧವಾರ ಆಗಮಿಸಿದಾಗ ಶ್ರೀ ಕೃಷ್ಣ ಮಠದ ವತಿಯಿಂದ ಹಾಗೂ ಸ್ವಾಗತ ಸೇವಾ ಸಮಿತಿಯ ವತಿಯಿಂದ ಶ್ರೀಮಠದ ಪಟ್ಟದ ದೇವರು ಹಾಗೂ ಶ್ರೀಪಾದರನ್ನು ಸುವರ್ಣ ಪಲ್ಲಕ್ಕಿ ಯೊಂದಿಗೆ ಸ್ವಾಗತಿಸಿ ಪರ್ಯಾಯ ಶ್ರೀಪಾದರು ಸಾಂಪ್ರದಾಯಿಕ ಸ್ವಾಗತ ಸಲ್ಲಿಸಿದರು. ತದನಂತರ ರಾಜಾಂಗಣದಲ್ಲಿ ಭವ್ಯ ಸ್ವಾಗತ ಸಮಾರಂಭ ನೆರವೇರಿತು.
ಉಡುಪಿ ಕ್ಷೇತ್ರದ ಮಹಿಮೆಯನ್ನು ಉಡುಪಿಯ ಜನ ಗುರುತಿಸುವಂತಾಗಬೇಕು: ಪುತ್ತಿಗೆ ಶ್ರೀ
ಭಂಡಾರಕೇರಿ ಶ್ರೀಪಾದರ ಚಾತುರ್ಮಾಸ್ಯದ ಸ್ವಾಗತ ಸಮಾರಂಭ ಸಭೆಯಲ್ಲಿ ಅಧ್ಯಕ್ಷೀಯ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು, ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ 37 ವರ್ಷಗಳ ಬಳಿಕ ಚಾತುರ್ಮಾಸ್ಯ ಸ್ವೀಕರಿಸಲಿದ್ದಾರೆ. ಭಾಗವತ ಫಲ ಭಗವದ್ಗೀತೆ ಕ್ಷೀರ ಎರಡರ ಪ್ರಸರಣ ಉಡುಪಿಯ ಜನತೆಗೆ ಆಗಲಿದೆ. ಉಡುಪಿ ಕ್ಷೇತ್ರವಾಗಿದ್ದು ಸದಾ ಒಂದಲ್ಲ ಒಂದು ಯತಿಗಳ ಪಾಠ ಪ್ರವಚನ ಚಾತುರ್ಮಾಸ್ಯ ಪರ್ವಕಾಲ ಸಂಸ್ಕೃತಿಯ ಕಾರ್ಯಕ್ರಮ ನಿತ್ಯ ರಥೋತ್ಸವ ನಿತ್ಯಾನ್ನದಾನ ಹೀಗೆ ಸದಾ ದೈವಿಕ ವಾತಾವರಣದಿಂದ ಕೂಡಿರುವ ಉಡುಪಿಯ ಮಹತ್ವವನ್ನು ಎಲ್ಲರೂ ಅರಿಯುವಂತಾಗಬೇಕು. ಭಂಡಾರಕೇರಿ ಶ್ರೀಪಾದರು ನಡೆಸಲಿರುವ ಮನೆ ಮನೆಯಲ್ಲಿ ಭಾಗವತ ಪ್ರವಚನ ಕಾರ್ಯಕ್ರಮದ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಅನುಗ್ರಹ ಸಂದೇಶ ನೀಡಿದರು.
ಶ್ರೀಮದ್ಭಾಗವತದಿಂದ ಅನಿಷ್ಟ ನಿವೃತ್ತಿ: ಶ್ರೀ ಭಂಡಾರಕೇರಿ ಮಠಾಧೀಶರು
ಶ್ರೀಮದ್ಭಾಗವತ ಪ್ರವಚನದಿಂದ ಅನಿಷ್ಟಗಳೆಲ್ಲವೂ ನಿವಾರಣೆಯಾಗುತ್ತದೆ. ಮನೆಯಲ್ಲಿ ರಕ್ಷೋಘ್ನ ಹೋಮದಂತೆ ಭಾಗವತವೂ ಮನೆಯ ಸುಖ-ಶಾಂತಿಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಮನೆಗಳಲ್ಲಿ ಚಾತುರ್ಮಾಸ್ಯ ಪರ್ವ ಕಾಲದ ಪ್ರಯುಕ್ತ ಗೃಹ ಸಂದರ್ಶನವನ್ನು ಮಾಡಿ ಭಾಗವತ ದೀಪದಿಂದ ನೀರಾಜನವನ್ನು ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ಸಂಕಲ್ಪಿಸಿದ್ದೇವೆ ಎಂದು ಶ್ರೀಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಿಳಿಸಿದರು. ಭಂಡಾರಕೇರಿ ಶ್ರೀಪಾದರ ಪಾಂಡಿತ್ಯ ಮತ್ತು ವ್ಯಾಖ್ಯಾನ ಕೌಶಲ್ಯವನ್ನು ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಪ್ರಶಂಶಿಸಿದರು.
ಪ್ರಸನ್ನ, ವಿದ್ಯೇಶ ತೀರ್ಥರರು ಸ್ವಯಂ ರಚಿಸಿದ ದಾಸರ ಪದವನ್ನು ಗೀತೆಯಾಗಿ ಹಾಡಿದಳು. ವಿದ್ವಾನ್ ಡಾ. ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿಯ ಯು.ಬಿ ಶ್ರೀನಿವಾಸ್ ಪ್ರಸ್ತಾವನೆ ಸಲ್ಲಿಸಿದರು. ವಿದ್ವಾನ್ ಬಿದರಹಳ್ಳಿ ರಘೋತ್ತಮಾಚಾರ್ಯರು ಅಭಿನಂದನಾ ಭಾಷಣ ಮಾಡಿದರು. ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಚಾರ್ಯ, ರತೀಶ್ ತಂತ್ರಿ, ಪ್ರದೀಪ್ ಕಲ್ಕೂರ್, ಸ್ವಾಗತ ಸಮಿತಿಯ ಚಂದ್ರಶೇಖರ್ ಆಚಾರ್ಯ, ರಾಜೇಶ್ ಭಟ್, ಜಯರಾಮಚಾರ್ಯ, ರಮೇಶ್ ಭಟ್, ರವೀಂದ್ರಾಚಾರ್ಯ ಮುಂತಾದವರು ಉಪಸ್ಥಿತರಿದ್ದರು.