Sunday, November 24, 2024
Sunday, November 24, 2024

ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಗ್ಯೂ ನಿರ್ಮೂಲನೆ ಸಾಧ್ಯ: ಡಾ. ಪ್ರಶಾಂತ್ ಭಟ್

ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಗ್ಯೂ ನಿರ್ಮೂಲನೆ ಸಾಧ್ಯ: ಡಾ. ಪ್ರಶಾಂತ್ ಭಟ್

Date:

ಉಡುಪಿ, ಜು.13: ಡೆಂಗ್ಯೂ ಜ್ವರ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ಈ ರೋಗ ಸೊಳ್ಳೆಗಳಿಂದ ಹರಡುವಂತದ್ದಾಗಿದ್ದು, ಸಾಮಾನ್ಯವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ನೀರಿನಲ್ಲಿ ಮೊಟ್ಟೆಗಳನ್ನಿಡುವ ಮೂಲಕ ಆಗುತ್ತದೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದರು. ನಗರದ ಪತ್ರಿಕಾ ಭವನದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ವತಿಯಿಂದ ಆಯೋಜಿಸಲಾದ ಡೆಂಗ್ಯೂ ಲಾರ್ವಾ ಪತ್ತೆ, ಪರೀಕ್ಷೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಈ ಕಚೇರಿಗಳ ಸುತ್ತಮುತ್ತ ಮಾಡುವುದರೊಂದಿಗೆ ಜನಸಾಮಾನ್ಯರಿಗೆ ಸೊಳ್ಳೆಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.

ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ಶುಕ್ರವಾರ ಒಣಗಲು ದಿನ ಆಚರಿಸುವಂತೆ ರಾಜ್ಯ ಸರ್ಕಾರವು ಸೂಚನೆ ನೀಡಿದೆ. ಡೆಂಗ್ಯೂ ಹರಡುವ ಸೊಳ್ಳೆಗಳ ಮೊಟ್ಟೆಗಳಾದ ಲಾರ್ವಾಗಳು ಶುದ್ಧ ನೀರಿನಲ್ಲಿ ಹುಟ್ಟುತ್ತವೆ. ಇವುಗಳ ನಿಯಂತ್ರಣಕ್ಕೆ ಸರಕಾರ ಪ್ರತೀ ಶುಕ್ರವಾರ ಜನಸಾಮಾನ್ಯರು ಡ್ರೆಡೇ ಯನ್ನಾಗಿ ಆಚರಿಸುವಂತೆ ಮಾರ್ಗದರ್ಶನ ನೀಡಿದೆ. ಕಾರಣ ಲಾರ್ವಾಗಳು ನೀರಿನ ಸಂಗ್ರಹಣದಲ್ಲಿರುವುದು ಸಾಮಾನ್ಯ. ಸಂಗ್ರಹಣದಲ್ಲಿರುವ ನೀರನ್ನು ಪೂರ್ತಿಯಾಗಿ ಚೆಲ್ಲಿದಾಗಲೂ ಸಹ ಲಾರ್ವಾಗಳು ಸಂಗ್ರಹಣದ ಒಳಭಾಗದಲ್ಲಿ ಅಂಟಿಕೊಂಡಿರುತ್ತವೆ. ಅವು ಸಾಯುವುದಿಲ್ಲ. ನೀರನ್ನು ಪುನಃ ತುಂಬಿಸಿದಾಗ ಅವು ಅಲ್ಲಿಯೇ ಇದ್ದು, ಬೆಳವಣಿಗೆ ಕಂಡುಕೊಳ್ಳುತ್ತವೆ. ಇವುಗಳ ನಿಯಂತ್ರಣಕ್ಕೆ ನೀರನ್ನು ಚೆಲ್ಲಿದ ನಂತರ ಸಂಗ್ರಹಣದ ಒಳಭಾಗವನ್ನು ಚೆನ್ನಾಗಿ ತೊಳೆಯಬೇಕು ಹಾಗೂ ಎರಡು ಗಂಟೆಗಳ ಕಾಲ ಒಣಗಿಸಿದ್ದಲ್ಲಿ ಮಾತ್ರ ಅವು ನಿರ್ಮೂಲನಾ ಹೊಂದುತ್ತವೆ. ಸಾರ್ವಜನಿಕರು ಈ ಕ್ರಮವನ್ನು ಅನುಸರಿಸಬೇಕು ಎಂದರು.

ಡೆಂಗ್ಯೂ ಹೇಗೆ ಹರಡುತ್ತದೆ?: ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುತ್ತದೆ. ಇದು ಸೋಂಕು ಹೊಂದಿದ ಈಡಿಸ್ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಇದರಿಂದ ಡೆಂಗ್ಯೂ ಹರಡುತ್ತದೆ.

ರೋಗದ ಮುಖ್ಯ ಲಕ್ಷಣಗಳೇನು?: ಡೆಂಗ್ಯೂ ಜ್ವರ ಬಂದಾಗ ದೇಹದಲ್ಲಿ ಕೆಲವು ಬದಲಾವಣೆ ಕಂಡು ಬರುತ್ತದೆ. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳು ಕೆಂಪಾಗುವುದು, ಮೈ- ಕೈಗಳ ಮೇಲೆ ದದ್ದು ಕಾಣಿಸುವುದು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ರೋಗದ ಪ್ರಮುಖ ಲಕ್ಷಣಗಳೆಂದರೆ ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ.

ಡೆಂಗ್ಯೂ ನಿಯಂತ್ರಣ ಹೇಗೆ?: ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್, ಬ್ಯಾರೆಲ್, ಮಣ್ಣಿನ ಮಡಿಕೆ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುತ್ತದೆ. ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರು ಶೇಖರಣೆ ಆಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈಯರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವಂತೆ,ಸ್ವಚ್ಛತೆ ಕಾಪಾಡುವಂತೆ ಜನಸಾಮಾನ್ಯರಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಹೇಗೆ?: ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿ ಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬಹುದು.ಡೆಂಗ್ಯೂ ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಮೀಪದ ಆಸ್ಪತ್ರೆ, ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ ರಕ್ತ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಡೆಂಗ್ಯೂ ರೋಗ ಕೆಲವೇ ಪ್ರಕರಣದಲ್ಲಿ ತೀವ್ರ ರಕ್ತಸ್ರಾವವಾದಲ್ಲಿ ರಕ್ತದ ಒತ್ತಡ ಕಡಿಮೆ ಆದಲ್ಲಿ ಐವಿ ದ್ರಾವಣ ನೀಡಬೇಕಾಗಬಹುದು. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಡೆಂಗ್ಯೂ ನಿಯಂತ್ರಣ ಮಾಹಿತಿ ಕುರಿತ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವುದರೊಂದಿಗೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಾಯಿತು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರೆಸ್‌ಕ್ಲಬ್‌ನ ಸುತ್ತಮುತ್ತಲಿನ ಪ್ರದೇಶ, ವಾರ್ತಾ ಇಲಾಖೆಯ ಸುತ್ತಮುತ್ತ, ರೆಡ್‌ಕ್ರಾಸ್ ಸಂಸ್ಥೆಯ ಆವರಣ ಹಾಗೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಡ್ರಂ, ಬ್ಯಾರಲ್, ನೀರಿನ ತೊಟ್ಟಿ, ನೀರು ನಿಂತ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ, ಅವುಗಳನ್ನು ನಾಶಪಡಿಸುವುದರೊಂದಿಗೆ, ಸಾರ್ವಜನಿಕರಿಗೆ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!