ಹೆಬ್ರಿ, ಜು.3: ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಭತ್ತದ ಬೇಸಾಯ ಮಾಡುತ್ತಿಲ್ಲ ಅವುಗಳಲ್ಲಿ ಒಂದು ಕಾರಣ ಕೂಲಿಗಾರರ ಸಮಸ್ಯೆ ಈ ಸಮಸ್ಯೆಗೆ ಪೂರಕವಾಗಿ ಯಾತ್ರೀಕೃತ ಬೇಸಾಯ ಪದ್ದತಿ ಅತ್ಯುತ್ತಮವಾಗಿದೆ. ಮುಂದಿನ ದಿನಗಳಲ್ಲಿ ಕೃಷಿಯ ಪ್ರಮಾಣವು ಇದೇ ರೀತಿಯಲ್ಲಿ ಕಡಿಮೆಯಾಗುತ್ತಾ ಹೋದರೆ ಆಹಾರ ಕೊರತೆಯೇ ಎದುರಿಸಬೇಕಾಗುತ್ತದೆ. ಆದ್ದರಿಂದ ಭತ್ತದ ಬೆಳೆಯ ಉಳಿವಿಗಾಗಿ ಅದೇ ರೀತಿ ಭತ್ತದ ಬೆಳೆಯನ್ನು ಲಾಭದಾಯಕವನ್ನಾಗಿ ಮಾಡಲು ಕೃಷಿ ವಿಜ್ಞಾನಿಗಳ ಸಲಹೆ ತಾಂತ್ರಿಕ ತರಬೇತಿಗಳನ್ನು ಪಡೆದು ಕ್ರಮಬದ್ದವಾಗಿ ಯಾಂತ್ರೀಕೃತ ಬೇಸಾಯವನ್ನು ಮಾಡಿ ಯಶಸ್ವಿಯಾಗಿ ಎಂದು ಹೆಬ್ರಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ ಜಿ ತಾಲೂಕು ಮಟ್ಟದ ರೈತ ಕ್ಷೇತ್ರ ಪಾಠಶಾಲೆ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಡುಪಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ – ಕೆವಿಕೆ ಬ್ರಹ್ಮಾವರ, ತಾಲೂಕು ಪಂಚಾಯತ್ ಹೆಬ್ರಿ, ಗ್ರಾಮ ಪಂಚಾಯತ್ ಶಿವಪುರ ಹಾಗೂ ಶಿವದುರ್ಗೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಿವಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಬುಧವಾರ ಶಿವಪುರ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇಲ್ಲಿನ ಹಿರಿಯ ವಿಜ್ಞಾನಿಗಳಾದ ಡಾ.ಧನಂಜಯ್ ಅವರು ಯಾಂತ್ರೀಕೃತ ಭತ್ತದ ಬೇಸಾಯದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿ, ನೇಜಿ ತಯಾರಿ, ಗದ್ದೆಯ ತಯಾರಿಯ ಕುರಿತು ತಿಳಿಸಿದರು. ರೈತರ ಪಾಠಶಾಲೆಯಲ್ಲಿ ‘ಸೀಡ್ ಟು ಸೀಡ್’ ಅಂದರೆ ಬಿತ್ತನೆಯ ಬೀಜದಿಂದ ಹಿಡಿದು ಕಳೆ ನಿರ್ವಹಣೆ, ಬೆಳೆ, ಕಟಾವು, ಒಕ್ಕಣೆ ಇತ್ಯಾದಿ ಎಲ್ಲಾ ಹಂತಗಳ ತರಬೇತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲಾಗುತ್ತದೆ ಎಂದರು. ಕೆವಿಕೆ ಬ್ರಹ್ಮಾವರ ಮಣ್ಣು ತಜ್ಞ ಡಾ.ಜಯಪ್ರಕಾಶ್ ಮಾತನಾಡಿ, ಮಣ್ಣಿನ ಸಂರಕ್ಷಣೆ, ಮಣ್ಣನ್ನು ಫಲವತ್ತಾಗಿಸುವಿಕೆ, ಜೀವಾಮೃತ, ಗೊಬ್ಬರಗಳು, ಕಳೆ ನಿಯಂತ್ರಣ ಹೀಗೆ ಅನೇಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಎನ್.ಆರ್.ಎಲ್.ಎಂ ಕೃಷಿ ಜಿಲ್ಲಾ ವ್ಯವಸ್ಥಾಪಕಿ ಡಾ. ಸೌಮ್ಯ ಕುಮಾರಿ ಮಾತನಾಡಿ ಬೀಜೋಪಚಾರ, ನೈಸರ್ಗಿಕ ಕೃಷಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ ಮಾತನಾಡಿ, ಹಳ್ಳಿಗಳಲ್ಲಿ ಇಂದಿಗೂ ಕೂಡ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ ಭತ್ತದ ಬೇಸಾಯದ ಬಗ್ಗೆ ಕೃಷಿಕರಿಗೆ ತಾಂತ್ರಿಕ ಮಾಹಿತಿ ಇರುವುದಿಲ್ಲ ಈ ರೀತಿಯಾಗಿ ಗ್ರಾಮೀಣ ಮಟ್ಟದಲ್ಲಿ ರೈತ ಕ್ಷೇತ್ರ ಪಾಠಶಾಲೆಯ ಮುಖಾಂತರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ, ತರಬೇತಿ ಪಡೆಯಲು ಎನ್.ಆರ್.ಎಲ್.ಎಂ – ಸಂಜೀವಿನಿ ಮುಖಾಂತರ ಸಾಧ್ಯವಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತದ ತರಬೇತಿಯೂ ಕೂಡ ಯಶಸ್ವಿಯಾಗಿ ನೆರವೇರಲಿ ಎಂದರು.
ಶಿವಪುರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಜ್ಯೋತಿ ಉಪಸ್ಥಿತರಿದ್ದರು. ನಂದಿನಿ ಪ್ರಾರ್ಥನೆಗೈದರು. ಎನ್.ಆರ್.ಎಲ್.ಎಮ್ ತಾಲೂಕು ವ್ಯವಸ್ಥಾಪಕಿ ಸವಿತಾ ಸ್ವಾಗತಿಸಿ, ಎನ್.ಆರ್.ಎಲ್.ಎಮ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್.ಎಲ್.ಎಮ್ ತಾಲೂಕು ವ್ಯವಸ್ಥಾಪಕಿ ಉಮಾ ಕಾರ್ಯಕ್ರಮ ನಿರೂಪಿಸಿದರು. ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕಿ ಬಬಿತಾ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಸಾಂಪ್ರದಾಯಿಕ ಹಾಗೂ ಪೌಷ್ಠಿಕ ತಿನಿಸುಗಳಾದ ಪತ್ರೊಡೆ, ಹಲಸಿನ ಹಣ್ಣಿನ ಕಡುಬು, ಮುಳ್ಕ ಹಾಗೂ ಕಷಾಯದ ಮಹತ್ವವನ್ನು ತಿಳಿಸಿ ವಿತರಿಸಲಾಯಿತು. ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ತರಬೇತಿಯಲ್ಲಿ ಹೆಬ್ರಿ ತಾಲೂಕಿನ ಎಲ್ಲಾ ಎಂ.ಬಿ.ಕೆ, ೀಲ್.ಸಿ.ಆರ್.ಪಿ, ಪಶುಸಖಿ, ಕೃಷಿಸಖಿ, ಕೃಷಿ ಉದ್ಯೋಗ ಸಖಿ, ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ರೈತ ಮಹಿಳೆಯರು ಹಾಜರಿದ್ದರು.