Sunday, January 19, 2025
Sunday, January 19, 2025

ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ

ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ

Date:

ಉಡುಪಿ, ಜೂ.30: ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಕಾಡುತ್ತವೆ. ಜನರ ಸಹಭಾಗಿತ್ವದೊಂದಿಗೆ ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನಗರದ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ಜನಸಾಮಾನ್ಯರಿಗೆ ರೋಗರುಜಿನಗಳು ಯಾವ ಮೂಲಕ ಎಲ್ಲಿಂದ ಬರುತ್ತವೆ, ಅವುಗಳ ಬಗ್ಗೆ ಮುಂಜಾಗೃತೆ ವಹಿಸುವುದು, ಚಿಕಿತ್ಸೆ ಪಡೆಯುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಬೇಕು. ಸಾಮಾನ್ಯವಾಗಿ ಹೆಚ್ಚು ರೋಗಗಳು ಸೊಳ್ಳೆಗಳ ಮೂಲಕ ಹರಡುತ್ತದೆ. ಇವುಗಳ ನಿಯಂತ್ರಣದ ಬಗ್ಗೆಯೂ ಪ್ರತಿಯೊಬ್ಬರಿಗೂ ಮಾಹಿತಿ ನೀಡಬೇಕು ಎಂದರು. ಕಾಲರಾ, ಟೈಫಾಯ್ಡ್, ಅತಿಸಾರ ಬೇಧಿ, ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯ, ಕಾಮಾಲೆ ರೋಗ ಸೇರಿದಂತೆ ಮತ್ತಿತರ ರೋಗಗಳಿಗೆ ಮೂಲ ಕಾರಣ ನೀರೆ ಆಗಿದೆ. ಮಳೆಯ ಕಲುಷಿತ ನೀರು, ಕುಡಿಯುವ ನೀರಿಗೆ ಬೆರೆತಾಗ ಕೆಲವೊಂದು ರೋಗಗಳು ಬಂದರೇ, ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣಾವಾಗಿ ಆಗುತ್ತದೆ, ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ತಂಬಾಕು ಉತ್ಪನ್ನಗಳನ್ನು ಶಾಲಾ- ಕಾಲೇಜುಗಳ ಸುತ್ತ 100 ಮೀ ವ್ಯಾಪ್ತಿಯಲ್ಲಿ ಮಾರಾಟ ಮಾಡುವುದು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಂಗಡಿಗಳ ಲೈಸೆನ್ಸ್ ಅನ್ನು ರದ್ದು ಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಅವರು, ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಅನುಮತಿ ಪತ್ರ ಪಡೆಯಬೇಕೆಂಬ ಕಾನೂನು ಜಾರಿಗೆ ಬಂದಿದೆ ಇದನ್ನು ಅನುಷ್ಠಾನಗೊಳಿಸಬೇಕು ಎಂದರು. ಜಿಲ್ಲೆಯಲ್ಲಿ ಅನಧೀಕೃತವಾಗಿ ಸ್ಕ್ಯಾನಿಂಗ್ ಸೆಂಟರ್‌ಗಳು ನಡೆಯುತ್ತಿರುವ ಬಗ್ಗೆ ಹಾಗೂ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಕಂಡುಬಂದ ಬಗ್ಗೆ ಮಾಹಿತಿ ನೀಡಿದಲ್ಲಿ ಅವರುಗಳಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು. ಪ್ರಸಕ್ತ ಸಾಲಿನ ಈವರೆಗೆ 302 ಗರ್ಭಪಾತ ಪ್ರಕರಣಗಳಾಗಿವೆ. ಅವುಗಳಲ್ಲಿ 84 ಸ್ವಾಭಾವಿಕ ಗರ್ಭಪಾತವಾಗಿವೆ. ಕಾನೂನು ಬಾಹಿರವಾಗಿ ವೈದ್ಯರ ಸಲಹೆಗಳಿಲ್ಲದೇ ಭ್ರೂಣ ಪತ್ತೆಗಳು ನಡೆಯುತ್ತಿರುವ ಬಗ್ಗೆ ಎಚ್ಚರವಹಿಸಬೇಕು ಎಂದರು. ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 3 ತಾಯಿ-ಮರಣ ಪ್ರಕರಣಗಳಾಗಿವೆ. ಅವುಗಳಲ್ಲಿ 2 ಹೊರಜಿಲ್ಲೆಗಳ ಪ್ರಕರಣಗಳಿವೆ. ಬಾಣಂತಿಯರಿಗೆ ಪ್ರಾರಂಭದಿಂದಲೇ ತಾಯಿ ಕಾರ್ಡ್ಗಳನ್ನು ವಿತರಿಸಿ, ನಿರಂತರ ಆರೋಗ್ಯ ತಪಾಸಣೆ ಮಾಡಬೇಕು. ಹೆರಿಗೆ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದರೊಂದಿಗೆ ಯಾವುದೇ ರೀತಿಯ ತಾಯಿ ಮರಣಗಳು ಸಂಭವಿಸದಂತೆ ಎಚ್ಚರ ವಹಿಸಬೇಕು. ಒಂದೊಮ್ಮೆ ಮರಣ ಪ್ರಕರಣ ಆದಲ್ಲಿ, ಅದರ ಮರುದಿನವೇ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದರು.

ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಅಗತ್ಯವಿರುವ ಔಷಧಿ, ಲಸಿಕೆ, ವ್ಯಾಕ್ಸಿನೇಷನ್ ಮತ್ತು ಕ್ಲೋರಿನೇಷನ್ ಸಾಮಾಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು. ಪ್ರವಾಹ ಸಂಭವನೀಯ ಪ್ರದೇಶಗಳ ಪಟ್ಟಿಮಾಡಿ ಆರ್.ಆರ್.ಟಿ ತಂಡಗಳನ್ನು ರಚಿಸಿ, ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮತ್ತು ಚಿಕಿತ್ಸೆ ನೀಡಲು ಸಿದ್ಧರಾಗಿರಬೇಕು. ಹಾಸ್ಟೆಲ್, ಅಂಗನವಾಡಿಗಳಲ್ಲಿ ಜ್ವರ ಸೇರಿದಂತೆ ಮತ್ತಿತರ ರೋಗಗಳು ಬಂದಾಗ ಅವುಗಳ ನಿವಾರಣೆಗೆ ಕ್ರಮ ವಹಿಸಬೇಕು ಎಂದರು. ಎಂಡೋಸಲ್ಫಾನ್ ಬಾಧಿತರ ಆರೋಗ್ಯ ಸುದಾರಣೆ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು. ಅವರಿಗೆ ಮಾಸಾಶನ ನಿಗಧಿತ ಅವಧಿಯಲ್ಲಿ ಪಾವತಿ ಆಗುತ್ತಿವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಬೈಂದೂರಿನ ನಾಡ ಗ್ರಾಮ ಪಂಚಾಯತ್‌ನ ಸೇನಾಪುರ ಗ್ರಾಮದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಕ್ರಮವಹಿಸಬೇಕು. ಪ್ರಸ್ತುತ ತಾತ್ಕಾಲಿಕವಾಗಿ ಹತ್ತಿರದಲ್ಲಿ ಲಭ್ಯವಿರುವ ಶಾಲಾ ಕಟ್ಟಡದಲ್ಲಿ ನಡೆಸಲು ಕ್ರಮವಹಿಸಬೇಕು. ಎಂಡೋ ಬಾಧಿತರಿರುವ ಪ್ರದೇಶಗಳ ಸಾರ್ವಜನಿಕ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಫಿ ಘಟಕಗಳನ್ನು ಪ್ರಾರಂಭಿಸಬೇಕು ಎಂದರು. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ಪ್ರಸ್ತುತ ಸಾಲಿನಲ್ಲಿ 7536 ನಾಯಿ ಕಡಿತ ಪ್ರಕರಣಗಳು, 151 ಹಾವು ಕಡಿತ ಪ್ರಕರಣಗಳಾಗಿವೆ. ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಮಣಿಪಾಲ ವ್ಯಾಪ್ತಿಯಲ್ಲಿ ಹೆಚ್ಚು ನಾಯಿ ಕಡಿತ ಪ್ರಕರಣಗಳಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ಷಯ ಮುಕ್ತ ಭಾರತ ಅಭಿಯಾನ ನಡೆಯುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷಯ ರೋಗಿಗಳನ್ನು ದತ್ತು ಪಡೆಯಲು ದಾನಿಗಳನ್ನು ಪ್ರೋತ್ಸಾಹಿಸಿ, ಕ್ಷಯ ರೋಗಿಗಳಿಗೆ ಚಿಕಿತ್ಸೆ ಹಾಗೂ ಪೌಷ್ಠಿಕ ಆಹಾರವನ್ನು ಒದಗಿಸಿ, ಕ್ಷಯರೋಗ ಹಾಗೂ ರೋಗಿಗಳನ್ನು ಗುಣಮುಖರನ್ನಾಗಿಸಿ, ಕ್ಷಯ ಮುಕ್ತ ಗ್ರಾಮವನ್ನಾಗಿಸಬೇಕು ಎಂದರು. ಜಿಲ್ಲೆಯಲ್ಲಿ 1500 ಯೂನಿಟ್ ರಕ್ತ ಸಂಗ್ರಹ ಮಾಡಬೇಕಾದ ಗುರಿ ಹೊಂದಲಾಗಿದೆ. ಆದರೆ, ಈವರೆಗೆ 29,107 ಯೂನಿಟ್‌ಗಳಷ್ಟು ರಕ್ತ ಸಂಗ್ರಹವಾಗಿರುತ್ತದೆ. ರಕ್ತ ನಿಧಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದಲ್ಲಿ ಅವುಗಳಿಗೆ ನಿಯಮಾನುಸಾರ ಅನುಮತಿ ನೀಡಬೇಕೆಂದು ಸೂಚನೆ ನೀಡಿದರು.
ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಂಪೌಂಡ್, ಉದ್ಯಾನವನವನ್ನು ನರೇಗಾದಡಿ ಕೈಗೊಳ್ಳಲು ಹಾಗೂ ಕಟ್ಟಡದ ಇತರೆ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!