Home ಸುದ್ಧಿಗಳು ಪ್ರಾದೇಶಿಕ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ: ಜಿಲ್ಲಾಧಿಕಾರಿ

ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ: ಜಿಲ್ಲಾಧಿಕಾರಿ

33
0

ಉಡುಪಿ, ಜೂ.28: ಜನಸಾಮಾನ್ಯರು ಸಣ್ಣ-ಪುಟ್ಟ ಸಮಸ್ಯೆಗಳಿಂದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಶುಕ್ರವಾರ ನಗರದ ಬನ್ನಂಜೆಯ ಬಿಲ್ಲವ ಸೇವಾ ಸಂಘದ ನಾರಾಯಣ ಗುರು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅಹವಾಲುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬಗೆಹರೆಯದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಅತೀ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ
ಒದಗಿಸಲಾಗುವುದು ಎಂದ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್ ಪೋರ್ಟಲ್ ನಲ್ಲಿ ದಾಖಲಿಸಿ ಆಯಾ ಇಲಾಖೆಗಳಿಗೆ ವರ್ಗಾಯಿಸುವುದರೊಂದಿಗೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಯಶ್‌ಪಾಲ್ ಎ ಸುವರ್ಣ, ಕಳೆದ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ಸಾರ್ವಜನಿಕ ಆಸ್ತಿ ಪುನರ್ ನಿರ್ಮಾಣಕ್ಕೆ, ಪರ್ಯಾಯ ಕಾರ್ಯಕ್ರಮದ ಸಮಯದಲ್ಲಿ ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಮುದ್ರದ ಕಡಲ ಕೊರೆತ, ತಡೆಗೋಡೆಗೆ ಸಂಬಂಧಿಸಿದಂತೆ ಅನುದಾನವನ್ನು ಸರಕಾರ ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು ಎಂದರು. ಅನೇಕ ಕಚೇರಿಗಳಲ್ಲಿ ಜನರು ಸಲ್ಲಿಸಿದ ಅಹವಾಲುಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಇವುಗಳನ್ನು ಹದಿನೈದು ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಆಶಯದೊಂದಿಗೆ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಸರಕಾರ ಹಾಗೂ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಉಡುಪಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ಪೌರಾಯುಕ್ತ ರಾಯಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಂದಾಯ ಇಲಾಖೆಯ-19, ನಗರಸಭೆಯ-14, ಗ್ರಾಮ ಪಂಚಾಯತ್‌ನ-4, ಸರ್ವೇ ಇಲಾಖೆಯ-8, ಸಮಾಜ ಕಲ್ಯಾಣ ಇಲಾಖೆ, ಮುಜರಾಯಿ ಇಲಾಖೆ, ವಿಕಲಚೇತನರ ಇಲಾಖೆ, ಲೋಕೋಪಯೋಗಿ ಇಲಾಖೆ, ಮೀನುಗಾರಿಕಾ ಇಲಾಖೆ, ಉದ್ಯೋಗ ಇಲಾಖೆ ಹಾಗೂ ಕೃಷಿ ಇಲಾಖೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ತಲಾ-1 ರಂತೆ ಒಟ್ಟು 54 ಅರ್ಜಿಗಳು ಸ್ವೀಕೃತವಾಗಿದ್ದು, ರಸ್ತೆ, ಮನೆ, ಜಮೀನು ಕೋಡಿ, ಒಳಚರಂಡಿ, ನೀರಿನ ಸೌಲಭ್ಯ, ವಿದ್ಯುತ್, ಹಕ್ಕುಪತ್ರ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಹವಾಲುಗಳು ಸಲ್ಲಿಕೆಯಾಗಿದ್ದವು. ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ನೆಕ್ಕೆರೆಕೆರೆಯ ಹತ್ತಿರದ ಗುಂಡಿಬೈಲ್ ವಾರ್ಡ್ನ ಸಾರ್ವಜನಿಕರು, ನಮ್ಮ ಊರಿನ ಮುಖ್ಯ ರಸ್ತೆಯು ಸತತ ಮಳೆಯಿಂದಾಗಿ ಹದಗೆಟ್ಟಿದ್ದು, ಮಕ್ಕಳು ಹಾಗೂ ವಯಸ್ಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಮತ್ತು ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಬಂದ ಅರ್ಜಿಗೆ, ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರು ಪರಿಶೀಲಿಸಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮಕೈಗೊಳ್ಳುವಂತೆ ತಿಳಿಸಿದರು. ಕೊಡವೂರು ವಾರ್ಡಿನ ನಗರಸಭಾ ಸದಸ್ಯ ಕೆ ವಿಜಯ ಕೊಡವೂರು ಅವರು, ಜಿಲ್ಲೆಯಲ್ಲಿ ಒಟ್ಟು 84 ಜನ ಬೆನ್ನುಮೂಳೆ ಆಘಾತಕ್ಕೆ ಒಳಗಾದವರನ್ನು ಗುರುತಿಸಿದ್ದು, ಅವರಿಗೆ ಅವಶ್ಯವಿರುವ ದಿನನಿತ್ಯದ ವಸ್ತುಗಳನ್ನು ಉಚಿತವಾಗಿ ನೀಡುವಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯ ಅಂಗವಿಕಲರ ಪುನರ್ವಸತಿ ಇಲಾಖೆಯು ಆದೇಶ ಹೊರಡಿಸಿದ್ದು, ಇದುವರೆಗೂ ಸರಿಯಾಗಿ ಯಾವುದೇ ದಿವ್ಯಾಂಗರಿಗೆ ಈ ಸೌಲಭ್ಯ ದೊರೆತಿರುವುದಿಲ್ಲ. ದಿವ್ಯಾಂಗರಿಗೆ ಅವಶ್ಯವಿರುವ ದಿನನಿತ್ಯ ವಸ್ತುಗಳನ್ನು ಆರೋಗ್ಯ ಕಿಟ್ ಮೂಲಕ ಒದಗಿಸುವಂತೆ ಸಲ್ಲಿಸಲಾದ ಮನವಿಗೆ, ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲೆಯಲ್ಲಿರುವ ಬೆನ್ನುಮೂಳೆ ಆಘಾತಕ್ಕೆ ಒಳಗಾದ ದಿವ್ಯಾಂಗರಿಗೆ ಮೆಡಿಕಲ್ ಕಿಟ್ ಅನ್ನು ದೊರೆಯುವಂತೆ ಮಾಡಲು ಕ್ರಮ ವಹಿಸಬೇಕು ಎಂದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.