ಬ್ರಹ್ಮಾವರ, ಜೂ.22: ಜಿ.ಎಂ. ಗ್ಲೋಬಲ್ ಸ್ಕೂಲ್, ಬ್ರಹ್ಮಾವರ ಇಲ್ಲಿ ಹತ್ತನೆಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಪ್ರಣವ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ, ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಇಂದು ಭಾರತವು ಯೋಗಾಸನ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ ಹಾಗೂ ಯೋಗಕ್ಕೆ ವಿಶ್ವಮಾನ್ಯತೆ ಇದೆ. ಶಿಸ್ತಿನ ಜೀವನವನ್ನು ನಡೆಸುವುದೇ ಒಂದು ಯೋಗ ಎಂದರು.
ಮುಖ್ಯ ಅತಿಥಿಯಾಗಿ ಯೋಗ ತರಬೇತುದಾರರಾದ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದ್ರೆಯಲ್ಲಿ ಸಹಶಿಕ್ಷಕಿ ಮಮತಾ ಗಣೇಶ್ ಅವರು ಅಷ್ಟಾಂಗ ಯೋಗ ಪರಿಪಾಲನೆ ನಿಮ್ಮಲ್ಲಿ ಬೆಳೆಸಿಕೊಳ್ಳಿ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗಾಭ್ಯಾಸದ ಆಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಜಿ.ಎಂ. ಗ್ಲೋಬಲ್ ಶಾಲಾ ಸಂಸ್ಥಾಪಕರು ಹಾಗೂ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ವಿಶ್ವ ಆರೋಗ್ಯಕ್ಕಾಗಿ ಯೋಗ, ಸದೃಢ ಮನಸ್ಸಿಗಾಗಿ ನಿರಂತರವಾಗಿ ಯೋಗಾಭ್ಯಾಸವನ್ನು ಮಾಡಿ ಎಂದು ತಿಳಿಸಿದರು. ಯೋಗದಿಂದ ರೋಗಮುಕ್ತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ವಿದ್ಯಾರ್ಥಿನಿ ಮಾನ್ಯತಾ ಯೋಗದ ಮಹತ್ವದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸ್ಮಯನ್ ಶೆಟ್ಟಿ ಸ್ವಾಗತಿಸಿ, ಶಿವಾನಿ ಪಾಟೀಲ್ ವಂದಿಸಿದರು.