Monday, January 20, 2025
Monday, January 20, 2025

ಕಾರಂತರದ್ದು ಶಾಸ್ತ್ರಕ್ಕಿಂತ ಮನೋಧರ್ಮ ಪ್ರಧಾನ ಸಾಹಿತ್ಯ: ಡಾ.ಲಕ್ಷ್ಮೀಶ ತೋಳ್ಪಾಡಿ

ಕಾರಂತರದ್ದು ಶಾಸ್ತ್ರಕ್ಕಿಂತ ಮನೋಧರ್ಮ ಪ್ರಧಾನ ಸಾಹಿತ್ಯ: ಡಾ.ಲಕ್ಷ್ಮೀಶ ತೋಳ್ಪಾಡಿ

Date:

ಉಡುಪಿ, ಜೂ.1: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ‘ಸಾಹಿತ್ಯ ಸಹವಾಸ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ದಿ. ಯು.ಆರ್.ಅನಂತಮೂರ್ತಿಯವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಶಿವರಾಮ ಕಾರಂತ, ನವ್ಯ ಸಾಹಿತ್ಯ, ಮತ್ತು ನವ್ಯ ಸಾಹಿತ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರ ಕುರಿತು ನೀಡಿರುವ ಉಪನ್ಯಾಸಗಳನ್ನು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಈ ವಿದ್ವತ್ಪೂರ್ಣ ಉಪನ್ಯಾಸಗಳು ಪಾಡ್ಕಾಸ್ಟ್ ರೂಪದಲ್ಲಿಯೂ ಎಲ್ಲ ಆಸಕ್ತರಿಗೆ ಲಭ್ಯವಾಗಲಿವೆ.

ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಿದ ನಾಡಿನ ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ “ಮನಸ್ಸು ಮುಟ್ಟಬಹುದಾದ ಸೂಕ್ಷ್ಮಾತಿಸೂಕ್ಷ್ಮವಾದ ಲಹರಿಗಳನ್ನು, ಅಸ್ತಿತ್ವದ ಬಿಂದುಗಳನ್ನು ಈ ನೆಲದ ಮೂವರು ಮಹನೀಯರಾದ ಕಾರಂತರು, ಅನಂತಮೂರ್ತಿ ಮತ್ತು ಅಡಿಗರು ಮುಟ್ಟಿದವರು. ಅಡಿಗರು ಸಿದ್ಧಶೈಲಿಯಿಂದ ಹೊರಟು ಹೊಸಹುಟ್ಟು ಅಥವಾ ತಾವು ಪಡೆಯಬೇಕಾದ ನಾವೀನ್ಯತೆಯ ಅನುಕೂಲದ ಅನಿವಾರ್ಯತೆಯನ್ನು ತೋರಿಸಿಕೊಟ್ಟವರು ಎಂದು ಬಣ್ಣಿಸಿದರು. ಕಾರಂತರದು ಸ್ವಯಂಕೃತ ವ್ಯಕ್ತಿತ್ವ. ತಮ್ಮದಾರಿ ಮತ್ತು ಅಭಿವ್ಯಕ್ತಿಯನ್ನು ತಾನೇ ಕಂಡುಕೊಂಡವರು. ಅದೊಂದು ಚಾರಿತ್ರಿಕ ಸ್ಥಿತಿಯಷ್ಟೇ ಅಲ್ಲ; ಅದಕ್ಕೆ ಅವರ ವ್ಯಕ್ತಿತ್ವದ ಪ್ರಯೋಗಶೀಲತೆಯೂ ಕಾರಣ. ಅವರದು ಲಿಪಿಬದ್ಧ ಸಂಪ್ರದಾಯ ಕಡಿಮೆ. ಮೌಖಿಕ ಸಂಪ್ರದಾಯವೇ ಹೆಚ್ಚು. ವೇಗ, ತಾತ್ಕ್ಷಣಿತ ಪ್ರವೃತ್ತಿ ಅವರಲ್ಲಿ ಎದ್ದು ಕಾಣುವ ಗುಣಗಳು. ಅವರದು ಕಾಯುವಿಕೆಗೆ ಒಗ್ಗದ ಅಸಲು ಕಸುಬು. ಶಾಸ್ತ್ರಕ್ಕಿಂತ ಅವರಿಗೆ ಮನೋಧರ್ಮ ಪ್ರಧಾನವಾಗಿರುವ ಭಾವ ಮುಖ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ತಮ್ಮ ತಂದೆಯವರ ನೆನಪುಗಳು ಹಾಗೂ ಅವರ ಸಾಹಿತ್ಯದ ಕೆಲಸಗಳು, ಸಾಹಿತಿಗಳ ಸಂಪರ್ಕವನ್ನು ಸ್ಮರಿಸಿಕೊಂಡರು. ಇಂದಿನ ಸಂದರ್ಭದಲ್ಲಿ ಅಂತಹ ಆರೋಗ್ಯಕರ ಚರ್ಚೆಯ ವಾತಾವರಣ ಕಾಣದಿರುವುದರ ಬಗ್ಗೆ ವಿಷಾದಿಸಿದರು. ಸಾಹಿತ್ಯ ವಿಮರ್ಶೆ ಇನ್ನಷ್ಟು ಗಂಭೀರವಾಗಿ ನಡೆಯಬೆಕಾದ ಅಗತ್ಯವನ್ನು ತಿಳಿಸಿದರು. ವಿಶೇಷವಾಗಿ ಅಡಿಗರ ಪ್ರಸಿದ್ಧ ಕವಿತೆ ‘ ರಾಮನವಮಿಯ ದಿವಸ’ ವನ್ನು ಓದಿ ಪದ್ಯ ಬರೆವ ಬಗೆಯ ಕುರಿತು ಗಂಭೀರ ಚರ್ಚೆ ನಡೆಸಿದ್ದನ್ನು ನಿರೂಪಿಸಿದರು. ತಂದೆಯವರ ಸೃಜನಾತ್ಮಕ ಪ್ರಕ್ರಿಯೆಯೇ ಅವರ ಮಾತಾಗಿತ್ತು. ಮಾತಾಡುತ್ತ ಆಡುತ್ತ ಅವರ ಚಿಂತನಶೀಲತೆ ಹುರಿಗಟ್ಟುತ್ತಿತ್ತು. ಅದಕ್ಕಾಗಿ ಅವರಿಗೆ ಜನಸಂಪರ್ಕದ ಅಗತ್ಯವಿತ್ತು. ಮಾತಿನ ಮೂಲಕವೇ ಅವರ ಹೊಸ ಯೋಚನೆಗಳು ರೂಪುತಳೆಯುತ್ತಿದ್ದವು ಎಂದು ತಿಳಿಸಿದರು. ಕಾರಂತ ಮತ್ತು ಅಡಿಗರ ಜೀವನವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಎಸ್ತರ್ ಅನಂತಮೂರ್ತಿ ಮತ್ತು ಕ್ಷಮಾ ರಾವ್ ಉಪಸ್ಥಿತರಿದ್ದರು. ಕಾರಂತರ ಬಗೆಗಿನ ಅನಂತಮೂರ್ತಿಯವರ ಬಗೆಗಿನ ಉಪನ್ಯಾಸಕ್ಕೆ ಪ್ರತಿಸ್ಪಂದಿಸಿದ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ, ಮಾತನಾಡಿ, “ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ತಮ್ಮ ಜೀವಮಾನದುದ್ದಕ್ಕೂ ಕಾರಂತರು ಮಾಡಿದವರು. ಒಂದು ಲಕ್ಷಪುಟಗಳಷ್ಟು ವಿಸ್ತಾರವಾದ, ನಾನೂರಕ್ಕೂ ಮಿಕ್ಕಿದ ಕೃತಿಗಳಷ್ಟು ವಿಫುಲವಾದ ಬರೆವಣಿಗೆ ಅವರದು. ಅವರನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ಎದ್ದು ಕಾಣುವುದು ಅವರ ಸಿಟ್ಟು. ಅನಂತಮೂರ್ತಿಯವರು ಕಾರಂತರ ಕುರಿತು ಮಾತಾಡುತ್ತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಭೂತ ಇದ್ದಂತೆ ಎಂದು ಹೇಳಿದ್ದು ನನ್ನನ್ನು ವಿಶೇಷವಾಗಿ ಸೆಳೆದಿದೆ ಎಂದು ಹೇಳಿದರು. ಅಡಿಗರ ಬಗೆಗಿನ ಅನಂತಮೂರ್ತಿಯವರ ಬಗೆಗಿನ ಉಪನ್ಯಾಸಕ್ಕೆ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ವಿಕ್ರಮ್ ವಿಸಾಜಿ ಮಾತನಾಡಿದರು.

ಕಾರಂತರ ಸಾಹಿತ್ಯ ಸೃಷ್ಟಿಯ ಕುರಿತ ವಿದ್ವತ್ ಗೋಷ್ಠಿಯಲ್ಲಿ ಹೆಸರಾಂತ ವಿಮರ್ಶಕರಾದ ಡಾ. ಟಿ. ಪಿ. ಅಶೋಕ, ಚಲನಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿ, ಬೆಂಗಳೂರಿನ ಎನ್‍ಎಂಕೆಆರ್‍ವಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಭಾಗವಹಿಸಿದ್ದರು. ಪ್ರಾಧ್ಯಾಪಕಿ ಡಾ. ತಾರಿಣಿ ಶುಭದಾಯಿನಿ ಅಡಿಗರ ಕಾವ್ಯದ ಬಗ್ಗೆ ಮಾತನಾಡಿದರು. ಅಜೀಂ ಪ್ರೇಮ್‍ಜಿ ಫೌಂಡೇಷನ್ ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಡಿಗರ ಕಾವ್ಯವಾಚನ, ಕಾರಂತರು ಮತ್ತು ಅಡಿಗರೊಂದಿಗಿನ ಒಡನಾಟದ ನೆನಪುಗಳ ಹಂಚಿಕೆ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ತಂದವು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಅಡಿಗರ ಗೀತೆಗಳ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಯಿತು. ಹಿರಿಯ ಒಡಿಸ್ಸಿ ನೃತ್ಯ ಕಲಾವಿದೆ ಮತ್ತು ಶಿವರಾಮ ಕಾರಂತರ ಮಗಳಾದ ಕ್ಷಮಾ ರಾವ್, ಅಜೀಂ ಪ್ರೇಮ್‍ಜಿ ಫೌಂಡೇಷನ್‍ನ ಉಮಾಶಂಕರ್ ಪೆರಿಯೋಡಿ, ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮದ ಸಹನಿರ್ದೇಶಕರಾದ ಎಸ್.ವಿ.ಮಂಜುನಾಥ್, ಡಯಟ್ ಉಡುಪಿಯ ಹಿರಿಯ ಉಪನ್ಯಾಸಕರಾದ ಡಾ. ಅಶೋಕ್ ಕಾಮತ್, ಪೂರ್ಣಪ್ರಜ್ಞ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್‍ನ ನಿರ್ದೇಶಕರಾದ ಡಾ. ಕೃಷ್ಣ ಕೊತ್ತಾಯರವರು ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಸುಶ್ಮಿತಾ, ಅಶ್ವಿನಿ. ಡಿ. ಎಸ್ ಹಾಗೂ ಮುಶೀನಾ ಬಾನು ಮೊದಲ ಮೂರು ಬಹುಮಾನ ಪಡೆದರು. ಗಾಯನ ಸ್ಪರ್ಧೆಯಲ್ಲಿ ಚಿನ್ಮಯಿ ರಾವ್, ಪ್ರಣದ್ ರಾವ್ ಹಾಗೂ ಅಕ್ಷರ ಬಹುಮಾನ ಗಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!