ಬಾರಕೂರು, ಜೂ.1: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬಾರ್ಕೂರು ಇಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹಿಮಕರ ಶೆಟ್ಟಿಯವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ್ ಆಚಾರ್ ಅವರು 2023 – 24ನೇ ಸಾಲಿನ ಕಾಲೇಜಿನ ವಾರ್ಷಿಕ ವರದಿಯನ್ನು ಸವಿವರವಾಗಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿನ ಪ್ರಾಂಶುಪಾಲರಾದ ರವೀಂದ್ರ ಉಪಾಧ್ಯ ಅವರು ಇಂದಿನ ಯುವ ಜನತೆ ಶಿಕ್ಷಣದ ಜೊತೆಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕೆಂದರು. ಕಾಲೇಜಿನ ಹಿರಿಯ ಗ್ರಂಥಪಾಲಕರಾದ ಹರೀಶ್ ಸಿ ಕೆ ಇವರು ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕೆಂದು ಕಿವಿಮಾತು ಹೇಳಿದರು. ಕಾಲೇಜಿನ ವಾರ್ಷಿಕ ಸಂಚಿಕೆ ‘ಹೆಜ್ಜೆ’ಯನ್ನು ಬಿಡುಗಡೆಗೊಳಿಸಲಾಯಿತು. ಜೂನ್ ತಿಂಗಳಲ್ಲಿ ನಿವೃತ್ತಿಗೊಳ್ಳಲಿರುವ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕರಾದ ಶ್ರೀನಿವಾಸ್ ಸೇರಿಗಾರ್ ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಲಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಗೌರವಿಸಲಾಯಿತು.
ರೇಂಜರ್ಸ್ ರೋವರ್ಸ್ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಗಳಿಸಿದ ಎಂಟು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಜಿತ್ ಕುಮಾರ್ ಶೆಟ್ಟಿ, ಐಕ್ಯೂಏಸಿ ಸಂಚಾಲಕರಾದ ವಿದ್ಯಾ ಪಿ., ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಶೋಭಾ ಆರ್., ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ನಿರಂಜನ ಶರ್ಮಾ, ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ ಹಾಗೂ ಲಾವಣ್ಯ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಗಳಾದ ಸುಜನ್, ಸುಶ್ಮಿತಾ, ರಂಜಿತಾ ಉಪಸ್ಥಿತರಿದ್ದರು. ತೃತೀಯ ಬಿಎ ತರಗತಿಯ ಸುಜನ್ ಪ್ರಾರ್ಥಿಸಿದರು. ಉಪನ್ಯಾಸಕಿ ಶೈಲಜಾ ಸ್ವಾಗತಿಸಿ, ತೃತೀಯ ಬಿಸಿಎ ತರಗತಿಯ ಮಂಜುನಾಥ್ ವಂದಿಸಿದರು. ಪ್ರಥಮ ಬಿಸಿಎ ತರಗತಿಯ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.