ಬ್ರಹ್ಮಾವರ, ಮೇ 25: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜಔಷಧಿ ಕೇಂದ್ರ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಮಳೆ ಬೆಳೆಗಾಗಿ ಪ್ರಾಣಿ ಪಕ್ಷಿ ಸಂಕುಲ ಮನುಕುಲದ ಉಳಿವಿಗಾಗಿ ಪರಿಸರ ಜಾಗೃತಿ ವಿಚಾರ ಸಂಕಿರಣ ಶನಿವಾರ ರೋಟರಿ ಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ನಾಗಬನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಸರಿಯಲ್ಲ. ಪ್ರಕೃತಿಯ ಉತ್ತಮ ಕೊಡುಗೆಯಾದ ಬನಗಳನ್ನು ಉಳಿಸುವುದರಿಂದ ಬಹಳಷ್ಟು ಜೀವಿಗಳನ್ನು ನಾಶವಾಗದಂತೆ ನೋಡಬಹುದು ಎಂದರು.
ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಭಟ್ ವಿವಿಧ ಆಯುರ್ವೇದ ಸಸ್ಯಗಳ ಪರಿಚಯ ಮತ್ತು ಅದರ ಉಪಯೋಗ ಕುರಿತು ಮಾಹಿತಿ ನೀಡಿದರು.
ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು ಹೀಗಾಗಿ ಈ ಬಗ್ಗೆ ಗಿಡಗಳನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು. ರೋಟರಿ ಅಧ್ಯಕ್ಷ ಉದಯ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಯಂಟ್ಸ್ ಯುನಿಟ್ ನಿರ್ದೇಶಕ ವಿವೇಕಾನಂದ ಕಾಮತ್, ಕಾರ್ಯದರ್ಶಿ ಮಿಲ್ಟನ್ ಒಲಿವೇರ ಮುಂತಾದವರಿದ್ದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಜಯಂಟ್ಸ್ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಸ್ವಾಗತಿಸಿ, ರಾಘವೇಂದ್ರ ಕರ್ವಾಲು ನಿರೂಪಿಸಿದರು.