ಮಣಿಪಾಲ, ಮೇ 24: ಕೃತಕ ಬುದ್ಧಿಮತ್ತೆಯು ಚಲನಚಿತ್ರೋದ್ಯಮದಲ್ಲಿ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಹಾಗೆಯೇ ಚಲನಚಿತ್ರಗಳು ಮಹಿಳೆ ಮತ್ತು ಹಿಂಸೆಯನ್ನು ಚಿತ್ರಿಸುವಲ್ಲಿ ಹೆಚ್ಚು ಸಂವೇದನಾಶೀಲವಾಗಬೇಕು ಎಂದು ಖ್ಯಾತ ಚಲನಚಿತ್ರ ನಿರ್ಮಾಪಕ ಅಭಯ ಸಿಂಹ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಆಶ್ರಯದಲ್ಲಿ ಫಿಲಂ ಎಸ್ಥೆಟಿಕ್ಸ್ ಬಿಯಾಂಡ್ ಕರಿಕ್ಯುಲಮ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕೃತಕ ಬುದ್ಧಿಮತ್ತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಚಲನಚಿತ್ರ ಕಲಾವಿದರು ಉದ್ಯೋಗ ಕಳೆದುಕೊಳ್ಳಬಹುದು. ಇದು ಚಲನಚಿತ್ರೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ‘ನೈತಿಕವಾಗಿ ಬಳಕೆ’ ಮಾಡಬೇಕಾದ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.
ಮೂಲತಃ ಮಂಗಳೂರಿನವರಾದ ಅಭಯಸಿಂಹ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದು , ಅವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪದವೀಧರರಾಗಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳ ಹೊರತಾಗಿ ಅವರು ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಆಧಾರಿತ ಪ್ರಶಸ್ತಿ ವಿಜೇತ ತುಳು ಚಲನಚಿತ್ರ ‘ಪಡ್ಡಾಯಿ’ ಸೇರಿದಂತೆ ನಾಲ್ಕು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರವು ಅರ್ಥದ ಬಹು ಸಾಧ್ಯತೆಗಳನ್ನು ಹೊಂದಿರುವ ದೃಶ್ಯ ಮಾಧ್ಯಮವಾಗಿದೆ. ಹೊಸ ತಂತ್ರಜ್ಞಾನವು ಅದರ ಸೌಂದರ್ಯ ಮತ್ತು ಅನುಭವದ ಮೇಲೆ ಪರಿಣಾಮ ಬೀರುತ್ತದೆ. ನೈತಿಕ ಮಾನದಂಡಗಳನ್ನು ಹಿಡಿದುಕೊಂಡು ಅರ್ಥಪೂರ್ಣ ಸಿನಿಮಾ ಮಾಡುವುದು ಚಿತ್ರ ನಿರ್ಮಾಪಕರಿಗೆ ಸವಾಲಾಗಿದೆ. ಹಿಂಸೆಯನ್ನು ಚಿತ್ರಿಸುವ ವಿವಿಧ ಸೃಜನಶೀಲಾ ವಿಧಾನಗಳಿರಬಹುದು. ಸಿನಿಮಾಗಳು ಮಹಿಳೆ ಮತ್ತು ಲಿಂಗ ಸಮಾನತೆಯ ವಿಷಯಗಳ ಕುರಿತು ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅವರ ತುಳು ಚಲನಚಿತ್ರ ‘ಪಡ್ಡಾಯಿ’ ಅನ್ನು ಪ್ರದರ್ಶಿಸುತ್ತಾ, ಅಭಯ ಸಿಂಹ ಅವರು ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಅನ್ನು ತಮ್ಮ ದೃಷ್ಟಿಕೋನದಿಂದ ಹೇಗೆ ಅರ್ಥೈಸಲು ಪ್ರಯತ್ನಿಸಿದರು ಎಂಬುದನ್ನು ವಿವರಿಸಿದರು. ಷೇಕ್ಸ್‌ಪಿಯರ್ ಅನ್ನು ನಮ್ಮದೇ ಆದ ಸಂದರ್ಭದಲ್ಲಿ ಮರುಸೃಷ್ಟಿಸಲು ಮತ್ತು ಮರು ವ್ಯಾಖ್ಯಾನಿಸುವ ಪ್ರಯತ್ನ ಒಂದು ಉತ್ತಮ ಅನುಭವ ಎಂದರು. ಚರ್ಚೆಯಲ್ಲಿ ಭಾಗವಹಿಸಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಅಭಯಸಿಂಹ ಅವರು ‘ಪಡ್ಡಾಯಿ’ ಯಲ್ಲಿ ಸಾರ್ವತ್ರಿಕ ಕಥೆಯನ್ನು ನಿರೂಪಿಸಲು ಪ್ರಾದೇಶಿಕ ವಿವರಗಳನ್ನು ಸಮೃದ್ಧವಾಗಿ ಬಳಸಿಕೊಂಡಿದ್ದಾರೆ ಎಂದರು. ಸಂವಾದದಲ್ಲಿ ಲೇಖಕರಾದ ಪ್ರೊ.ಮುರಳೀಧರ ಉಪಾದ್ಯ, ಪ್ರೊ.ಫಣಿರಾಜ್, ನಟಿ-ನೃತ್ಯ ಕಲಾವಿದೆ, ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಘರ್ ಅಡಾ ಕಾರ್ಯಕ್ರಮ ನಿರ್ವಹಿಸಿದರು.