ಉಡುಪಿ, ಮೇ 23: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಮಹಾಮಂಡಳ ವತಿಯಿಂದ ಮುಂಬೈನಲ್ಲಿ ಆಯೋಜಿಸಿದ್ದ ಭಾರತ್ ಕೋ ಆಪರೇಟಿವ್ ಬ್ಯಾಂಕಿಂಗ್ ಸಮ್ಮಿಟ್ 2024 ಸಮಾರಂಭದಲ್ಲಿ ಸಹಕಾರ ಕ್ಷೇತ್ರದ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ನೀಡುವ ರಾಷ್ಟ್ರ ಮಟ್ಟದ ಪ್ರತಿಷ್ಟಿತ ಭಾರತ್ ರತ್ನ ಸಹಕಾರಿತ ಸನ್ಮಾನ್ 2024 ಬೆಸ್ಟ್ ಯಂಗ್ ಲೀಡರ್ ಪ್ರಶಸ್ತಿಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ವೀಕರಿಸಿದರು.
ಕರಾವಳಿ ಕರ್ನಾಟಕದ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಟ ಫೆಡರೇಷನ್ ನಿ. ಮಂಗಳೂರು ಇದರ ಅಧ್ಯಕ್ಷರಾಗಿರುವ ಯಶ್ಪಾಲ್ ಸುವರ್ಣ ತಮ್ಮ ಅಧ್ಯಕ್ಷತೆಯಲ್ಲಿ ಎರಡು ಸಂಸ್ಥೆಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ ನಿರಂತರ ಲಾಭದಾಯಕ ಸಂಸ್ಥೆಯನ್ನಾಗಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ಈಗಾಗಲೇ ಸಹಕಾರ ಕ್ಷೇತ್ರದ ಸರ್ವಾಂಗೀಣ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಸಹಕಾರ ಇಲಾಖೆಯ 2022ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಯಶ್ ಪಾಲ್ ಸುವರ್ಣ ರವರು ತಮ್ಮ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಬ್ಯಾಂಕಿಗೆ ಹಲವಾರು ರಾಷ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸರಕಾರದ ಮಾಹಿತಿ ಹಾಗೂ ಸಂವಹನ ಇಲಾಖೆಯ ಜಂಟಿ ಕಾರ್ಯದರ್ಶಿ ಸುಮ್ನೇಶ್ ಜೋಷಿ ಯಶ್ಪಾಲ್ ಸುವರ್ಣ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.