ಉಡುಪಿ, ಮೇ 14: ವಿಶ್ವ ಗೀತಾ ಪರ್ಯಾಯ ನಿಮಿತ್ತ ನಡೆಯುವ ಜ್ಞಾನ ಯಜ್ಞದಲ್ಲಿ ಭಗವದ್ಗೀತೆಯಲ್ಲಿ ಬರುವ ವಿಭೂತಿ ಯೋಗದ ಕುರಿತಂತೆ ಸರಣಿ ಉಪನ್ಯಾಸ ಮಾಲಿಕೆಯ ಪ್ರಥಮ ಭಾಗವನ್ನು ಪೂರೈಸಿದ ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಪರ್ಯಾಯ ಪುತ್ತಿಗೆ ಶ್ರೀಪಾದರು, ಕಿರಿಯ ಶ್ರೀಪಾದರ ಸಮಕ್ಷಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬಹು ಭಾಷೆಗಳಲ್ಲಿ ಸ್ವಯಂ ಓದಬಲ್ಲ ಬೃಹತ್ ಭಗವದ್ಗೀತೆಯನ್ನು ನೀಡುವ ಮೂಲಕ ಅಭಿನಂದಿಸಿದರು. ಅದಮಾರು ಶ್ರೀಗಳು ವಿಶಿಷ್ಟ ಪೆನ್ನಿನ ಸಹಾಯದಿಂದ ಗೀತೆಯ ಎಲ್ಲ ಶ್ಲೋಕಗಳನ್ನು ಕಿವಿಗೆ ಇಂಪಾಗಿ ಕೇಳುವಂತೆ ರಚಿಸಲಾದ ಮುದ್ರಿತ ಪುಸ್ತಕವನ್ನು ಬಹಳ ಕುತೂಹಲದಿಂದ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅದಮಾರು ಶ್ರೀಪಾದರ ಉಪನ್ಯಾಸಗಳು ಸರಳ ನಿರೂಪಣಾ ಶೈಲಿ ಮತ್ತು ನೇರ ದಿಟ್ಟ ನುಡಿಗಳಿಂದ ದೇಶ ವಿದೇಶಗಳ ಸಾವಿರಾರು ಜಿಜ್ಞಾಸುಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ಭಾಗದ ಉಪನ್ಯಾಸಕ್ಕೆ ಜನ ಹಾತೊರೆಯುತ್ತಿದ್ದಾರೆ. ಹೀಗಾಗಿ ಮುಂದಿನ ಕಂತುಗಳ ಉಪನ್ಯಾಸವನ್ನು ಶ್ರೀಗಳು ಆದಷ್ಟು ಬೇಗ ಆನುಗ್ರಹಿಸಬೇಕೆಂದು ಆಶಿಸುತ್ತಾ, ಅವರ ಸಹೃದಯತೆ ಮತ್ತು ವಾತ್ಸಲ್ಯವನ್ನು ಪರ್ಯಾಯ ಶ್ರೀಗಳು ನೆನೆಪಿಸಿಕೊಂಡರು.