ಕೋಟ, ಮೇ 12: ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಪ್ರಸ್ತುತ ಅನುಭವಿಸುವ ಉಷ್ಣತೆ ಮತ್ತಷ್ಟು ತೀವ್ರಗೊಳ್ಳಲಿದೆ. ಈ ಬಗ್ಗೆ ಇವಾಗಲೇ ಜಾಗೃತರಾಗುವುದು ಒಳಿತು ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಪಡುಕರೆ ವಾರ್ಡ್ ಸದಸ್ಯ ರವೀಂದ್ರ ತಿಂಗಳಾಯ ಹೇಳಿದರು. ಅವರು ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ ಕೋಟತಟ್ಟು ಗ್ರಾಮ ಪಂಚಾಯತ್, ಟೀಮ್ ಭವಾಬ್ಧಿ ಪಡುಕರೆ ಸಂಯೋಜನೆಯೊಂದಿಗೆ ೨೦೭ನೇ ಭಾನುವಾರದ ಪರಿಸರ ಸ್ನೇಹಿ ಕಾರ್ಯಕ್ರಮದ ಸಲುವಾಗಿ ಕೋಟತಟ್ಟು ಪಡುಕರೆ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಬಗ್ಗೆ ಇತ್ತೀಚಿಗಿನ ದಿನಗಳಲ್ಲಿ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಎಲ್ಲಂದರಲ್ಲಿ ತ್ಯಾಜ್ಯಗಳು ಎಸೆಯುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ. ಈ ರೀತಿಯ ಮನಸ್ಥಿತಿ ಮಾರಕವಾಗಲಿದೆ ಎಂದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಟೀಮ್ ಭವಾಬ್ಧಿ ಪ್ರಮುಖರಾದ ದೇವೇಂದ್ರ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್, ಶ್ರೀ ಚಿತ್ತಾರಿ ಟ್ರಸ್ಟ್ ಸಹಕಾರ ನೀಡಿತು.