ಉಡುಪಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ರೂಪಿಸಲಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಜಿಲ್ಲೆಯಲ್ಲಿ ಸಾಗರೋತ್ಪನ್ನವನ್ನು ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಆಯ್ಕೆ ಮಾಡಲಾಗಿದೆ.
ಸದ್ರಿ ಯೋಜನೆಯಡಿ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉನ್ನತಿಕರಣಕ್ಕಾಗಿ ಈ ಹಿಂದೆ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಶೇ.35 ರ ಸಹಾಯಧನದೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಶೇ.15 ರ ಸಹಾಯಧನ ಪ್ರಸ್ತುತ ಒದಗಿಸಲಾಗುತ್ತಿದ್ದು, ಯೋಜನೆಯಡಿ ದೊರೆಯುವ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಳ ಮಾಡಲಾಗಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೀನು, ತೆಂಗು, ಹಾಲಿನ ಉತ್ಪನ್ನ, ಪಶು ಆಹಾರ, ಮಾಂಸದ ಉತ್ಪನ್ನ ಮತ್ತು ಇತರೆ ಆಹಾರ ಸಂಸ್ಕರಣೆ ಘಟಕ ಮೇಲ್ದರ್ಜೆಗೇರಿಸಲು ಆದ್ಯತೆ ಮೇರೆಗೆ ಸಹಾಯಧನವನ್ನು ನೀಡಲಾಗುತ್ತಿದೆ.
ಆಸಕ್ತ ಫಲಾನುಭವಿಗಳು ಸ್ವಂತ ಉದ್ಯಮವನ್ನು ಸ್ಥಾಪಿಸಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟ, ಮೊ: 9019075051/7204192914 ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಇಲಾಖೆ, ರಜತಾದ್ರಿ ಮಣಿಪಾಲ ಕಚೇರಿಯನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.