Monday, January 20, 2025
Monday, January 20, 2025

ಹೀಟ್‌ವೇವ್‌ನಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಲಹೆ

ಹೀಟ್‌ವೇವ್‌ನಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಲಹೆ

Date:

ಉಡುಪಿ, ಏ.4: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆ, ಹೀಟ್ ವೇವ್ (ಶಾಖದ ಹೊಡೆತ) ಸ್ಟ್ರೋಕ್ ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನಂತೆ ಸಲಹೆಗಳನ್ನು ನೀಡಿದೆ. ಸಾರ್ವಜನಿಕರು ಬಿಸಿಲಿನ ದಿನಗಳಲ್ಲಿ ಕೊಡೆ/ಛತ್ರಿ ಬಳಸುವುದರೊಂದಿಗೆ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು. ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಬೇಕು. ಹಿರಿಯ ನಾಗರಿಕರು, ಮಕ್ಕಳು ಆದಷ್ಟು ಹೆಚ್ಚು ನೀರು ಸೇವಿಸಬೇಕು.

ಬೆಳಿಗ್ಗೆ 12 ರಿಂದ ಸಂಜೆ 3 ಗಂಟೆಯ ವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸಾಕಷ್ಟು ನೀರು ಕುಡಿಯುವುದರೊಂದಿಗೆ ಮಜ್ಜಿಗೆ ಮತ್ತು ಗ್ಲೋಕೋಸ್ / (ಓ.ಆರ್.ಎಸ್) ನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಟ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬಹುದು ಅಥವಾ ವ್ಯಕ್ತಿಯನ್ನು ಐಸ್‌ಬ್ಲಾಕ್‌ಗಳ ಮಧ್ಯೆ ಇಡಬಹುದು.

ಹೀಟ್ ವೇವ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಯಲ್ಲಿ ಯಾವುದೇ ಸುಧಾರಣೆ ಕಂಡುಬಾರದಿದ್ದಾಗ ಕೂಲಿಂಗ್ ವ್ಯವಸ್ಥೆಯೊಂದಿಗೆ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು, ಓ.ಆರ್.ಎಸ್ ಹಾಗೂ ಮಜ್ಜಿಗೆಯಂತಹ ಪಾನೀಯಗಳನ್ನು ಬಳಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಪ್ರಯಾಣದ ಸಂದರ್ಭದಲ್ಲಿ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.

ಆರೋಗ್ಯ ಕಾಪಾಡಿಕೊಳ್ಳುಲು ಸಲಹೆಗಳು : ಅತೀ ಹೆಚ್ಚು ತಾಪಮಾನಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸುವುದು, ತಂಪಾದ ಒದ್ದೆ ಬಟ್ಟೆಯನ್ನು ಹಾಕುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು. ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು. ಕಪ್ಪು, ನೀಲಿ ಬಣ್ಣದ ಬಟ್ಟೆ ಧರಿಸದೇ ಹೆಚ್ಚು ಕಾಟನ್ ಬಟ್ಟೆ ಧರಿಸಬೇಕು. ಬಿಸಿಲಿನಿಂದ ವಿಟಮಿನ್ ಸಿ ಕೊರತೆ ಎದುರಾಗುವುದರಿಂದ ಹೆಚ್ಚು ನಿಂಬೆ ಹಣ್ಣಿನ ಜ್ಯೂಸ್ ಕುಡಿಯಬೇಕು. ಬೆಳಗ್ಗೆ ಎದ್ದ ತಕ್ಷಣ ತುಳಸಿ ಎಲೆಗಳನ್ನು ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯುವುದರಿಂದ ಆಯಾಸ ಆಗುವುದಿಲ್ಲ.

ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ತಲೆ ಮತ್ತು ಮೆದುಳು ತಂಪಾಗಿರಲು ಎರಡು ದಿನಗಳಿಗೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ ಹರಳೆಣ್ಣೆ ಹಚ್ಚಬೇಕು. ರಾತ್ರಿ ಮಲಗುವಾಗ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ. ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ರುಬ್ಬಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿಯನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ದೇಹಕ್ಕೆ ಒಳ್ಳೆಯದು.

ಮೇಲ್ಕಂಡ ಸಲಹೆಗಳನ್ನು ಪಾಲಿಸಿ, ಹೀಟ್ ವೇವ್‌ನಿಂದ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ತುರ್ತು ಸೇವೆಗೆ ಶುಲ್ಕ ರಹಿತ ನಂ. 1077 ಅಥವಾ ದೂ.ಸಂಖ್ಯೆ: 0820-2574802, 2574360 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!