ಉಡುಪಿ, ಮಾ.30: ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನಕ್ಕೆ ಅಸಡ್ಡೆ, ಅಡ್ಡದಾರಿಯನ್ನು ಹಿಡಿಯದೇ ಸಮರ್ಥ ನಾಯಕತ್ವದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ. ಅವರು ಇಂದು ನಗರದ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಪಿ.ಜಿ. ಎ.ವಿ. ಹಾಲ್‌ನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಜಿಲ್ಲಾ ಲೀಡ್ ಕಾಲೇಜು ವತಿಯಿಂದ ಚುನಾವಣಾ ಸಾಕ್ಷರತಾ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಅಂತರಿಕ ಗುಣಮಟ್ಟ ಭರವಸ ಕೋಶದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿ, ಕೊಡುಗೆ ಹಿತಾದೃಷ್ಟಿಯಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು. ಲೋಕಸಭಾ ಚುನಾವಣೆಯ ಈ ಹಬ್ಬದಲ್ಲಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮತದಾನದ ಬಗ್ಗೆ ನಿರಾಸಕ್ತಿ ಹೊಂದಿರುವರನ್ನು ಗುರುತಿಸಿ ಈ ಬಗ್ಗೆ ಮನವರಿಕೆ ಮಾಡಿಸಿ ಮತದಾನ ಮಾಡಿಸುವ ಮಹತ್ತರವಾದ ಜವಾಬ್ಧಾರಿ ಯುವ ಜನರ ಮೇಲಿದೆ. ಹಣ, ಉಡುಗೊರೆಯ ಆಮಿಷಕ್ಕೆ ಬಲಿಯಾಗದೇ ಶುದ್ಧ ಪ್ರಾಮಾಣಿಕ ಮತದಾನ ಮಾಡಬೇಕು ಎಂದರು. ನಗರಸಭೆಯ ಪೌರಾಯುಕ್ತ ರಾಯಪ್ಪ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕು. ಯುವ ಜನತೆ ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ಎನ್‌ಎಸ್‌ಎಸ್ ಯೋಜನಾಕಾರಿ ವಿದ್ಯಾ ಡಿ., ಸಾಕ್ಷರತಾ ಸಂಘದ ಕ್ಯಾಂಪಸ್ ರಾಯಭಾರಿ ವಿದ್ಯಾರ್ಥಿನಿ ಗಾನವಿ ಕೆ. ಉಪಸ್ಥಿತರಿದ್ದರು. ಚುನಾವಣಾ ಸಾಕ್ಷರತಾ ಸಂಘದ ಸಂಚಾಲಕ ಮಂಜುನಾಥ ಸ್ವಾಗತಿಸಿ, ಚುನಾವಣಾ ಸಾಕ್ಷರತಾ ಸಂಘದ ಕ್ಯಾಂಪಸ್ ರಾಯಭಾರಿ ವಿದ್ಯಾರ್ಥಿನಿ ಮಂಗಳಾ ಗೌರಿ ಭಟ್ ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಕಾರಿ ಡಾ. ನಿಕೇತನಾ ವಂದಿಸಿದರು.