ಉಡುಪಿ, ಮಾ.29: ಕುಂದಾಪುರದ ಶ್ಯಾನುಭಾಗ ಕುಟುಂಬಿಕರ ಮೂಲ ಶ್ರೀ ನಾಗ ಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನಾಗಯಕ್ಷಿ, ರಕ್ತೇಶ್ವರಿ ಮತ್ತು ಪರಿವಾರ ದೇವರುಗಳ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಪೂಜಾ ವಿಧಿಗಳನ್ನು ವೇದಮೂರ್ತಿ ರವೀಂದ್ರ ಆಚಾರ್ಯ ನಯಂಪಳ್ಳಿ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ಭಜನಾ ಕಾರ್ಯಕ್ರಮ ಜರಗಿತು. ಮಾಧ್ಯಹ್ನ ಆಶ್ಲೇಷಾ ಬಲಿ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರು ಶ್ರೀ ನಾಗ ಸನ್ನಿಧಿಗೆ ಭೇಟಿ ನೀಡಿದರು. ಸ್ವಾಮೀಜಿಯವರನ್ನು ಪೂರ್ಣಕುಂಭ, ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ ನೆರವೇರಿಸಿ ಗುರುಕಾಣಿಕೆ ಸಲ್ಲಿಸಲಾಯಿತು. ಬಹಳ ಹಿಂದಿನ ಕಾಲದಿಂದಲೂ ಶ್ಯಾನುಭಾಗ ಕುಟುಂಬಿಕರ ಮೂಲ ನಾಗಸನ್ನಿಧಿಯ ಜೊತೆ ಪರಿಸರದ ಹಲವಾರು ಕುಟುಂಬದ ಭಕ್ತರು ನಂಬಿಕೊಂಡು ಬಂದಿರುವ ಕಾರ್ಣಿಕದ ಕ್ಷೇತ್ರವಾಗಿ ಬೆಳೆಯಲು ಮುಖ್ಯ ಕಾರಣ ಭಕ್ತಜನರ ಅಚಲವಾದ ನಂಬಿಕೆ, ಭಕ್ತಿಯಿಂದ ಮಾಡುವ ಸೇವೆ ಹಾಗೂ ಬೇಡಿದನ್ನು ನೀಡುವ ಶ್ರೀ ದೇವರ ಅಭಯ ಪ್ರಸಾದವೇ ಸಾಕ್ಷಿ ಎಂದು ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಚಂದ್ರಕಾಂತ್ ಶ್ಯಾನುಭಾಗ, ರಾಮದಾಸ್ ಶೆಣೈ, ಅರ್ಚಕರಾದ ಚೇಂಪಿ ರಮೇಶ ಭಟ್, ಪ್ರದೀಪ್ ಭಟ್, ಗಣೇಶ್ ಭಟ್ ಕಲ್ಯಾಣಪುರ, ಮಂಜುನಾಥ ಆಚಾರ್ಯ ಉಡುಪಿ ಮುಂತಾದವರು ಉಪಸ್ಥಿತರಿದ್ದರು.
ಶ್ಯಾನುಭಾಗ ನಾಗ ಸನ್ನಿಧಿ: ಪುನರ್ ಪ್ರತಿಷ್ಠಾ ಮಹೋತ್ಸವ
ಶ್ಯಾನುಭಾಗ ನಾಗ ಸನ್ನಿಧಿ: ಪುನರ್ ಪ್ರತಿಷ್ಠಾ ಮಹೋತ್ಸವ
Date: