ಕೋಟ, ಮಾ.29: ಪ್ರಸ್ತುತ ವಿದ್ಯಮಾನಗಳಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಬೇಕು, ಆ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಮೊಳಹಳ್ಳಿಯ ಯುವ ಕೃಷಿಕ ಪ್ರವೀಣ್ ಕುಲಾಲ್ ಹೇಳಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ರೈತಧ್ಚನಿ ಸಂಘ ಕೋಟ ಸಹಯೋಗದೊಂದಿಗೆ ಶುಕ್ರವಾರ ರೈತರೆಡೆಗೆ ನಮ್ಮ ನಡಿಗೆ 34ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಯುವ ಕೃಷಿಕ ಪ್ರವೀಣ್ ಕುಲಾಲ್ ಗೌರವ ಸ್ವೀಕರಿಸಿ ಮಾತನಾಡಿದರು.
ಕೃಷಿ ಕಾಯಕದಲ್ಲಿ ಕಷ್ಟ ನಷ್ಟಗಳು ನೋವು ನಲಿವುಗಳು ಇರುವುದು ಸಹಜ. ಆದರೆ ನಷ್ಟವಾಯಿತು ಎಂದು ದೃತಿಗೆಡಬಾರದು. ಒಂದೇ ರೀತಿಯ ಕೃಷಿ ನೀತಿಯಿಂದ ಹೊರಬಂದು ಎಲ್ಲಾ ರೀತಿಯ ಆಧುನಿಕ ಕೃಷಿ ನೀತಿಗೆ ಒಗ್ಗಿಕೊಳ್ಳಬೇಕು. ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿಯಲ್ಲಿ ಮುಂಚೂಣಿಗೆ ನಿಲ್ಲಬೇಕು. ಈ ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಧ್ಯೇಯದೊಂದಿಗೆ ಮೊದಲು ರೈತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಆ ಮೂಲಕ ಕೃಷಿ ಅವಲಂಬಿತ ರಾಷ್ಟ್ರವಾಗಿ ಸದಾ ನಿಲ್ಲಬೇಕು ಎಂದರು. ಕುಂದಾಪುರ ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ರಮಿತಾ ಮಾತನಾಡಿ, ಪ್ರವೀಣ್ ಕುಲಾಲ್ ಯುವ ಸಮುದಾಯಕ್ಕೆ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಹೊಸ ಹೊಸ ಆವಿಷ್ಕಾದರ ಮೂಲಕ ಕೃಷಿ ಕ್ಷೇತ್ರದಲ್ಲಿ ಅದು ಗ್ರಾಮೀಣ ಭಾಗವಾದ ಈ ಪ್ರದೇಶದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ. ಸರಕಾರದಿಂದ ಸಿಗುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳವ ಮೂಲಕ ಕೃಷಿ ಕಾಯಕದಲ್ಲಿ ಸ್ವಾವಲಂಬಿ ಬದುಕು ಕಾಣುತ್ತಿದ್ದಾರೆ. ಪಂಚವರ್ಣ ಸಂಸ್ಥೆ ರೈತರನ್ನು ಗುರುತಿಸುವ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು. ಕೃಷಿ ಪರಿಕರವನ್ನಿಟ್ಟು ಪ್ರವೀಣ್ ಕುಲಾಲ್ ಮೊಳಹಳ್ಳಿಯವರನ್ನು ಪಂಚವರ್ಣ ಸಾಧಕ ಕೃಷಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಯುವ ನ್ಯಾಯವಾದಿ ಚಂದ್ರ ಪೂಜಾರಿ ತೆಕ್ಕಟ್ಟೆ, ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಪಂಚವರ್ಣದ ಪದಾಧಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಸ್ವಾಗತಿಸಿ, ಸಂಚಾಲಕಿ ಸುಜಾತ ಎಂ ಬಾಯರಿ ಪ್ರಾಸ್ತಾವಿಕವಾಅಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕೇಶವ ಆಚಾರ್ ವಂದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.