ಉಡುಪಿ: ಮಹಾಪುರುಷರ ತತ್ವಾದರ್ಶಗಳ ಪಾಲನೆಯಿಂದ ಹಾಗೂ ಅವರುಗಳ ಜಯಂತಿ ಆಚರಣೆಯಿಂದ ಸಮಾಜದ ಉನ್ನತಿಗೆ ಪ್ರೇರಣೆ ದೊರೆಯಲಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಮತ್ತು ಕವಿ ಸರ್ವಜ್ಞ ಜಯಂತಿ ಆಚರಣೆಯಲ್ಲಿ, ಮೂವರು ಮಹಾಪುರುಷರ ಬಗ್ಗೆ ಮಾತನಾಡುತ್ತಾ, ಶಿವಾಜಿಯ ಶೌರ್ಯ, ದೇಶಭಕ್ತಿ, ಭಾರತದ ಸಂಸ್ಕೃತಿ ರಕ್ಷಣೆ, ಸಂತ ಸೇವಾಲಾಲರ ಸಮಾಜ ಸುಧಾರಣಾ ಕಾರ್ಯಗಳು ಮತ್ತು ಕವಿ ಸರ್ವಜ್ಞರು ನೀಡಿರುವ ತ್ರಿಪದಿಗಳ ಅನನ್ಯ ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ಈ ಮಹಾನೀಯರ ಜೀವನ ಮತ್ತು ಆದರ್ಶ ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಇಂದು ಜನರ ಸಹಕಾರದಿಂದ ನಾವು ಕೋವಿಡ್ ನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಇದರ ಸಂಪೂರ್ಣ ನಿರ್ಮೂಲನೆಗೆ ಮುಂದೆಯೂ ಎಲ್ಲರ ಸಹಕಾರದ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು.
ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಮಾತನಾಡಿ, ಈ ಆದರ್ಶ ಪುರುಷರ ತತ್ವ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೂ ಈ ಬಗ್ಗೆ ಅರಿವು ಮೂಡಿಸಿ ಜಯಂತಿ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕೆಂದರು.
ಕೃಷ್ಣ ನಗರಿ ಸಂತ ಶ್ರೀ ಸೇವಾಲಾಲ ಬಂಜಾರ ಸಂಘದ ಅಧ್ಯಕ್ಷ ಕುಮಾರ ಕೆ.ಎಮ್ ರವರು ಸಂತ ಸೇವಾಲಾಲ ಕುರಿತು ಮಾತನಾಡಿದರು. ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಅಧ್ಯಕ್ಷರಾದ ಪ್ರಕಾಶ್ ರಾವ್, ರಾಜ್ಯ ಸಂಘದ ಪದಾಧಿಕಾರಿ ಬಿ.ಕೇಶವರಾವ್ ಬಡಾನಿಡಿಯೂರು, ಛತ್ರಪತಿ ಶಿವಾಜಿ ವಿವಿದ್ದೋದ್ದೇಶ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷ ಲಕ್ಷ್ಮಣ್ ನಾಯಕ್, ಪ್ರಶಾಂತ್, ಶಿವಾಜಿ ಕುರಿತು ಮಾತನಾಡಿದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಶೇಖರ್ ಕುಲಾಲ್ ಸರ್ವಜ್ಞರ ಕುರಿತು ಮಾತನಾಡಿದರು. ಸಮಾಜದ ಪ್ರಮುಖರಾದ ಮನೋಹರ್ ಲಂಬಾಣಿ, ದಯಾನಾಥ ಜಿ.ರಾವ್, ಸಂತೋಷ ಕುಲಾಲ್, ಸತೀಶ್ ಕುಲಾಲ್, ಐತು ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ ವಂದಿಸಿದರು.