ಕೋಟ, ಮಾ.19: ದೈಹಿಕ ಸಾಮರ್ಥ್ಯಕ್ಕೆ ಕ್ರೀಡಾ ಕಾರ್ಯಕ್ರಮಗಳು ಸಹಕಾರಿ. ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆಯ ಮೆಟ್ಟಿಲುಗಳನ್ನು ಏರುವಂತಾಗಲಿ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಕೋಟದ ಪಡುಕರೆ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ೨೦೨೩-೨೪ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿ ಭಾರತದ ಕೀರ್ತಿ ಹೆಚ್ಚಿಸಿ. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಆ ಮೂಲಕವೇ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ಕಾಣಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.
ಪಥ ಸಂಚಲನ, ಕ್ರೀಡಾಜ್ಯೋತಿ ಬೆಳಗಿ, ಕ್ರೀಡಾ ಪ್ರತಿಜ್ಞಾ ವಿಧಿ ಬೋಧನೆ ನಡೆಯಿತು. ಕೋಟ ಠಾಣೆಯ ಮಹಿಳಾ ಠಾಣಾಧಿಕಾರಿ ಸುಧಾ ಪ್ರಭು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ರಮೇಶ್ ಹೆಚ್ ಕುಂದರ್ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಸುನೀತಾ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸಂಯುಕ್ತ ಪ್ರೌಢಶಾಲಾ ಸಹಶಿಕ್ಷಕ ರಾಮದಾಸ್ ನಾಯಕ್, ಪ್ರಾಥಮಿಕ ಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕ ಮಂಜುನಾಥ ಕೆ.ಎಸ್., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಂಕರ್ ನಾಯ್ಕ್ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ ಕೋಡಿ, ವಿದ್ಯಾರ್ಥಿ ಮುಖಂಡರಾದ ಶ್ರವಣ್ ಶೆಟ್ಟಿ, ಅಶ್ವಿನಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮನೋಜ್ ಕುಮಾರ್ ಸ್ವಾಗತಿಸಿ, ಇತಿಹಾಸಶಾಸ್ತ್ರ ವಿಭಾಗದ ರಾಜಣ್ಣ ಎಂ ಕಾರ್ಯಕ್ರಮ ನಿರೂಪಿಸಿದರು.