ಉಡುಪಿ, ಮಾ.15: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಅದಕ್ಕೆ ಮುಖ್ಯ ಕಾರಣ ತೊಂದರೆ ಕಾಣಿಸಿಕೊಂಡಾಗ ಮಾತ್ರ ಅವರು ವೈದ್ಯರ ಬಳಿಗೆ ಹೋಗುವುದು. ಸಮಸ್ಯೆಗಳು ಇಲ್ಲದಾಗಲೇ ಸಮಸ್ಯೆಗಳು ಬರದಂತೆ ಮುಂಜಾಗರೂಕತೆ ವಹಿಸಲು ಪ್ರತಿವರ್ಷ ಅಥವಾ ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಮಹಿಳೆಯರು ವೈದ್ಯರನ್ನು ಭೇಟಿ ಮಾಡಲೇಬೇಕು ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಅಂಜಲಿ ಸುನಿಲ್ ಮುಂಡ್ಕೂರು ಹೇಳಿದರು. ಬ್ರಾಹ್ಮಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಮ್ಮಿಕೊಂಡ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಅವರು ಆರೋಗ್ಯ ಮಾಹಿತಿ ನೀಡಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಖ್ಯಾತ ಲೇಖಕಿ, ಸಾಹಿತಿ, ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ತಮ್ಮ ದಿಕ್ಸೂಚಿ ಭಾಷಣದಲ್ಲಿ ಸ್ತ್ರೀಯರನ್ನು ಪುರುಷ ಸಮಾಜ ದೇವರನ್ನಾಗಿ ಮಾಡಿ ಕಟ್ಟುಪಾಡುಗಳಿಂದ ಬಂಧಿಯಾಗಿಸುವ ಬಗೆಗಿನ ಹಿಂದಿನ ಕಾಲದ ಚಿಂತನೆ ನಂತರದ ಸುಧಾರಣೆ, ಕಾಯ್ದೆಗಳ ಬಗ್ಗೆ ಮಾತನಾಡುತ್ತಾ ಈಗಲೂ ಅಂತಹ ಕೆಲವು ಮೂಢ ಆಚರಣೆಗಳು ಹಳ್ಳಿಯ ಪ್ರದೇಶದಲ್ಲಿ ಕಾಣಸಿಗುತ್ತವೆ ಎನ್ನುತ್ತ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಿಳಿ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಮಹಿಳೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭರತನಾಟ್ಯ ವಿಷಾರದೆ ವಿದುಷಿ ಯಶಾ ರಾಮಕೃಷ್ಣ, ಅಂಚೆ ಸಹಾಯಕಿ, ಸಾಹಿತಿ ಫಿಲಾಟಲಿ ಮತ್ತು ಕಾರ್ಯಕ್ರಮ ನಿರ್ವಹಣೆ ಇತ್ಯಾದಿ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಪೂರ್ಣಿಮಾ ಜನಾರ್ಧನ್, ರಾಷ್ಟ್ರೀಯ ಈಜು ಪಟು- ವಾಣಿ ಬಾಲಚಂದ್ರ ಸನ್ಮಾನ ಪುರಸ್ಕೃತರು. ಆರೋಗ್ಯ ಸುರಕ್ಷಾ ಕಾರ್ಡ್ ನ ಪ್ರಯೋಜನ ಹಾಗೂ ಇನ್ನಿತರ ಮಾಹಿತಿಯನ್ನು ಅದರ ಸಂಚಾಲಕ ಚೈತನ್ಯ ಎಂ ಜಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ನಂತರ ಅಯೋಧ್ಯೆಯ ಬಾಲರಾಮನನ್ನು ಕಂಡು ಬೆಳ್ಳಿ ಕಲಶದೊಂದಿಗೆ ಅಷ್ಟಾವಧಾನ ಸೇವೆ ಮಾಡಲು ಅನುವು ಮಾಡಿಕೊಟ್ಟ ಪರಿಷತ್ತಿಗೆ ಹಾಗೂ ಸದಸ್ಯರಿಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ರಾಧಿಕಾ ಚಂದ್ರಕಾಂತ್ ವಹಿಸಿ ಮಾತನಾಡುತ್ತಾ, ಸಂಸ್ಥೆಗಿರುವ ಕಳಕಳಿಯನ್ನು ಸ್ಮರಿಸಿದರು.
ಸನ್ಮಾನಿತರ ಪರವಾಗಿ ವಿದುಷಿ ಯಶಾ ರಾಮಕೃಷ್ಣ ಇವರು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಬಹಳ ಸಂತಸ ತಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 18 ಕ್ಕೂ ಹೆಚ್ಚು ನೂತನ ಮಹಿಳಾ ಸದಸ್ಯರು ಪರಿಷತ್ತಿಗೆ ಸೇರ್ಪಡೆಗೊಂಡರು. ಆರೋಗ್ಯ ಕಾರ್ಡಿನ ನಿರ್ವಹಣೆಯನ್ನು ಮಾಡಿದ ರಘುಪತಿ ರಾವ್, ಮುರಳಿ ಅಡಿಗ, ಜನಾರ್ದನ್ ಭಟ್ ಮತ್ತು ಹರಿಪ್ರಸಾದ್ ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಆಶಾ ರಘುಪತಿ ರಾವ್ ಸ್ವಾಗತಿಸಿ, ಶಶಿಪ್ರಭ ಕಾರಂತ್ ವಂದಿಸಿದರು. ಅಮಿತಾ ಕ್ರಮಾಧಾರಿ ಹಾಗೂ ಜ್ಯೋತಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ವಸುಧ ಕೃಷ್ಣರಾಜ, ರೂಪಶ್ರೀ ರಾಜೇಶ್ ಹಾಗೂ ಪದ್ಮಲತ ವಿಷ್ಣು, ದಿವ್ಯ ವಿ ಪಾಡಿಗಾರು ಹಾಗೂ ಸುನಿತಾ ಚೈತನ್ಯ ಸನ್ಮಾನಿತರನ್ನು ಮತ್ತು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ಕೆ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮತ್ತು ಆರೋಗ್ಯ ಕಾರ್ಡ್ ನ ಸಂಚಾಲಕ ಚೈತನ್ಯ ಎಂ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸುಮನಾ ಕಕ್ಕುಂಜೆಯವರ ನೇತ್ರತ್ವದಲ್ಲಿ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.