ಉಡುಪಿ, ಮಾ.13: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರಸಭಾ ಕಚೇರಿಯಲ್ಲಿ ನಗರಸಭಾ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪೌರಾಯುಕ್ತ ರಾಯಪ್ಪ ಮಾತನಾಡಿ, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಸತ್ಯವಾದ ಮಾತು. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ನಗರಸಭೆಯ ಘನತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ದಿನ 1000 ಕೆ.ಜಿ ಗೂ ಅಧಿಕ ತ್ಯಾಜ್ಯವನ್ನು ಪ್ರತ್ಯೇಕಿಸಿ ನಿರ್ವಹಣೆ ಮಾಡಿದ ಸ್ಪಂದನಾ ನಗರ ಸ್ತ್ರೀ ಶಕ್ತಿ ಗುಂಪಿನ ವನಜ, ಶ್ರೀ ಸಿದ್ದಿ ನಗರ ಸ್ತ್ರೀ ಶಕ್ತಿ ಗ್ರೂಪ್‌ನ ಚಂದಾ ಅನಂದ್ ಅಂಚನ್ ಹಾಗೂ ಕಾರುಣ್ಯ, 2 ನಿರಂತರ ಉಳಿತಾಯ ಗುಂಪಿನ ಮೀನಾಕ್ಷಿ ಹಾಗೂ ತ್ಯಾಜ್ಯ ಸಂಗ್ರಹಣೆಯ ವಾಹನದ ಮಹಿಳಾ ಚಾಲಕಿ ಸ್ಮಿತಾ ಅವರನ್ನು
ಸನ್ಮಾನಿಸಿ ಗೌರವಿಸಲಾಯಿತು.
ಪರಿಸರ ಅಭಿಯಂತರಾದ ಸ್ನೇಹ ಕೆ.ಎಸ್, ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಕಚೇರಿ ವ್ಯವಸ್ಥಾಪಕ ನಾಗರಾಜ ಕೆ, ಕಂದಾಯ ಅಧಿಕಾರಿ ಸಂತೋಷ್ ಎಸ್.ಬಿ, ಸಮುದಾಯ ಸಂಘಟನಾ ಅಧಿಕಾರಿ ನಾರಾಯಣ ಎಸ್ ಎಸ್, ಸುರೇಂದ್ರ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಂದಾಯ ವಿಭಾಗದ ಸುಧಾಕರ್ ಕೋಟ್ಯಾನ್ ನಿರೂಪಿಸಿ, ವಂದಿಸಿದರು.