ಮಣಿಪಾಲ, ಮಾ.12: ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಇಪ್ಪತೈದು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರದಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ. ಇದೇ ನಿಟ್ಟಿನಲ್ಲಿ ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಾರ್ಚ್ 11 ರಿಂದ 16 ರವರೆಗೆ ಬೆಳಿಗ್ಗೆ 9.00 ರಿಂದ ಅಪರಾಹ್ನ 4 ರವರೆಗೆ ಒತ್ತಡ ನಿರ್ವಹಣೆ ಹಾಗೂ ಮನೋಬಲ ವರ್ಧನೆ ಚಿಕಿತ್ಸಾ ಶಿಬಿರ- ‘ಪ್ರಜ್ಞಾ ಕಲ್ಪ’ ವನ್ನು ಕಾಯಚಿಕಿತ್ಸಾ ವಿಭಾಗದಿಂದ ಆಯೋಜಿಸಲಾಗಿದೆ.
ಮುನಿಯಾಲ್ ಆಯುರ್ವೇದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ., ಪಿ.ಜಿ. ಡೀನ್ ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ್ ಭಟ್, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ದಿನೇಶ್ ನಾಯಕ್ ಜೆ., ಆಸ್ಪತ್ರೆಯ ಮೇಲ್ವಿಚಾರಕ ಡಾ. ಪ್ರಮೋದ್ ಶೇಟ್, ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಾಧವಿ ಮತ್ತು ಡಾ.ರಶ್ಮಿ ಕಲ್ಕೂರ, ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿದ್ಯಾಶ್ರೀ, ರೋಗನಿಧಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿಲ್ವಿನಿಯ ಎ ಫೆರ್ನಾಂಡಿಸ್ ಇವರು ಸಾಂಕೇತಿಕವಾಗಿ ಉದ್ಘಾಟಿಸಿದರು. ಸಂಸ್ಥೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಆಪ್ತ ಸಮಾಲೋಚನೆ ಹಾಗೂ ಉಚಿತ ತಪಾಸಣಾ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದ್ದು ಖಿನ್ನತೆ, ಅತಿಯಾದ ಭಯ, ನಿದ್ರಾ ಹೀನತೆ, ಮಾನಸಿಕ ಒತ್ತಡ, ಮುಟ್ಟು ನಿಲ್ಲುವ ಸಂದರ್ಭ ಮಾನಸಿಕ ತುಮುಲ, ಅತಿಯಾದ ಚಿಂತೆ, ಚಿತ್ತವಿಕಲತೆ, ಗೀಳು ಖಾಯಿಲೆ, ಮೂರ್ಛೆ ರೋಗ, ಆತಂಕ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಿ.