ಕುಂದಾಪುರ, ಮಾ.5: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್ ಉಡುಪಿ, ಕೃಷಿ ಇಲಾಖೆ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗುಜ್ಜಾಡಿ, ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇವರ ಆಶ್ರಯದಲ್ಲಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ ಇದರ ಫಲಾನುಭವಿಯಾದ ಕವಿತಾ ಗಾಣಿಗ ಇವರು ನೂತನವಾಗಿ ಪ್ರಾರಂಭಿಸಿರುವ ಶ್ರೀ ದುರ್ಗಾ ಸಂಜೀವಿನಿ ಚಿಕ್ಕಿ ಘಟಕವನ್ನು ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಜೀವಿನಿ ಸ್ವ ಸಹಾಯ ಸಂಘದ ಮೂಲಕ ಇಂದು ಅನೇಕ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಸ್ವ ಉದ್ಯೋಗ ಮಾಡುತ್ತಿರುವ ಮಹಿಳೆಯರು ಇಂದು ಉದ್ಯಮಿಗಳಾಗುತ್ತಿದ್ದಾರೆ, ಇತರ ಮಹಿಳೆಯರಿಗೂ ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ. ದೊಡ್ಡ ಉದ್ಯಮವನ್ನು ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಮಾಡಬಹುದೆಂಬುದನ್ನು ಕವಿತಾ ಗಾಣಿಗ ಇವರು ತೋರಿಸಿಕೊಟ್ಟಿದಾರೆ. ಗ್ರಾಮೀಣ ಭಾಗದ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಲ್ಲೂ ಸಹ ಇದೇ ರೀತಿ ಬೇರೆ ಬೇರೆ ಉದ್ಯಮದ ಮನೋಭಾವ ಬಂದು ಹೆಚ್ಚಿನ ಮಹಿಳೆಯರು ಉದ್ಯಮಿಗಳಾಗುವುದರ ಮೂಲಕ ಇನ್ನಷ್ಟು ಮಹಿಳಾ ಸಬಲೀಕರಣವಾಗಲಿ ಎಂದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಮ್ಮಯ್ಯ ದೇವಾಡಿಗ, ಕುಂದಾಪುರ ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ರಾಮಚಂದ್ರ ಮಯ್ಯ, ವಲಯ ಶಿಕ್ಷಣಾಧಿಕಾರಿ ನಾಗೇಶ್ ಮಯ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ಕರ್ನಾಟಕ ಬ್ಯಾಂಕ್ ಗುಜ್ಜಾಡಿ ವ್ಯವಸ್ಥಾಪಕರಾದ ಅಪರ್ಣ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟಿ, ತಾಲೂಕು ವ್ಯವಸ್ಥಾಪಕರಾದ ಯತೀಶ್, ಪ್ರಶಾಂತ್, ಚಿತ್ತಾರ ತಾಲೂಕು ಒಕ್ಕೂಟದ ಅಧ್ಯಕ್ಷರಾದ ವಿಜಯ ಗಾಣಿಗ, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಮೇಸ್ತ, ಜಿಸೆಂತಾ, ಲೋಲಾಕ್ಷಿ ಪಂಡಿತ್, ಮುಖ್ಯ ಪುಸ್ತಕ ಬರಹಗಾರರಾದ ಪ್ರಮೀಳಾ, ಎಲ್.ಸಿ.ಆರ್.ಪಿ ಕೃಷಿ ಸಖಿ, ಪಶು ಸಖಿ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.