ಉಡುಪಿ, ಫೆ.18: ಆಚಾರ್ಯ ಮಧ್ವರ ಜೀವನ ವೃತ್ತಾಂತದ ಅನುಕ್ರಮವನ್ನು ಆಧರಿಸಿದ ಶ್ರೀ ಮಧ್ವಾಷ್ಟೋತ್ತರ ಶತನಾಮಾವಳಿಯ ಧ್ವನಿಮುದ್ರಿಕೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಡಾ. ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಧ್ವನವಮಿಯಂದು ಲೋಕಾರ್ಪಣೆಗೊಳಿಸಿದರು. ಪಲಿಮಾರು ಮಠದ 24ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ರಘುಪ್ರವೀರ ತೀರ್ಥರು ರಚಿಸಿರುವ ಈ ನಾಮಾವಳಿಯನ್ನು ಸಾಮೂಹಿಕ ಪಾರಾಯಣಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ತೌಳವ ಮಾಧ್ವ ಒಕ್ಕೂಟ ಧ್ವನಿ ಮುದ್ರಿಸಿದ್ದು, ಪ್ರತೀ ಭಾನುವಾರ ಬೆಳೆಗ್ಗೆ 10 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಸಾಮೂಹಿಕ ಪಾರಾಯಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಗಳು ಪ್ರಕಟಿಸಿದರು.
ಆಚಾರ್ಯ ಮಧ್ವರ ಕುರಿತ ಯಾವುದೇ ರೀತಿಯ ಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಶ್ರೀಗಳು ಆಶೀರ್ವಚಿಸಿದರು. ಒಕ್ಕೂಟದ ಪ್ರತಿನಿಧಿ ಮತ್ತು ಸಾಮೂಹಿಕ ಪಾರಾಯಣ ಪ್ರಭಾರಿ ವೆಂಕಟೇಶ್ ಭಟ್, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಕೋಟಿ ಗೀತಾ ಲೇಖನ ಯಜ್ಞ ಸಂಕರ್ಷಣ ಪ್ರಖಂಡದ ಪೂರ್ಣಾವಧಿ ಪ್ರಚಾರಕ ರಮಣಾಚಾರ್ಯ, ಅಂತರ್ಯಾಮಿಯ ಪ್ರಮೋದ್ ಸಾಗರ್, ಅನಂತಕೃಷ್ಣ ಪ್ರಸಾದ್, ವಿಕ್ರಂ ಕುಂಟಾರು, ಅಖಂಡ ಗೀತಾ ಪಾರಾಯಣ ಪ್ರಭಾರಿಗಳಾದ ಉಮಾ ಪ್ರಸಾದ್, ಶೋಭಾ ಪ್ರಮೋದ್ ಮತ್ತಿತರು ಉಪಸ್ಥಿತರಿದ್ದರು. ಈ ಉಚಿತ ಧ್ವನಿಮುದ್ರಿಕೆ ಮತ್ತು ಪಠ್ಯ ಹಾಗೂ ಸಾಮೂಹಿಕ ಪಾರಾಯಣಕ್ಕಾಗಿ 8792158946 ಅಥವಾ 9845960418 ನ್ನು ಸಂಪರ್ಕಿಸಲು ಶ್ರೀ ಮಠದ ಪ್ರಕಟಣೆ ತಿಳಿಸಿದೆ.