ಬ್ರಹ್ಮಾವರ, ಫೆ.18: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಸಮಾರಂಭ ಶನಿವಾರ ನಡೆಯಿತು. ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್ ಅವರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ನಾದ ಹಿನ್ನೆಲೆಯ ಬಗ್ಗೆ ವಿಸ್ತ್ರತವಾಗಿ ಮಾತನಾಡಿದರು. ಇಡೀ ಜಗತ್ತಿಗೆ ಜ್ಯೋತಿ ಸ್ವರೂಪರಾಗಿರುವ ಬಸವಣ್ಣನವರು, ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದ್ದಾರೆ. ಜಾತಿ ಎಂಬ ಸಂಕೋಲೆಯಿಂದ ಜನರನ್ನು ಹೊರತರಲು ಅವರು ಮಾಡಿದ ಕಾರ್ಯ ಇಂದಿಗೂ ಮಾದರಿಯಾಗಿದೆ. ಸಮಾಜದ ಎಲ್ಲಾ ಸಮಸ್ಯೆಗಳಿಗೂ ಬಸವಣ್ಣನವರ ವಚನಗಳಲ್ಲಿ ಪರಿಹಾರವಿದೆ. 12ನೇ ಶತಮಾನದಲ್ಲಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಪಷ್ಟ ಕಲ್ಪನೆಯನ್ನು ಮಾಡಿದುದು ಅವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ರಾಧಾಕೃಷ್ಣ ನಾಯಕ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.