ಉಡುಪಿ, ಫೆ.10: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಪುರಂದರ ದಾಸರ ಭಾವಚಿತ್ರ ಕೃತಿಗಳ ಶೋಭಾಯಾತ್ರೆ ರಥಬೀದಿಯಲ್ಲಿ ನೆರವೇರಿತು. ವಿವಿಧ ಭಜನಾ ತಂಡಗಳು, ವಾದ್ಯ ಮೇಳಗಳೊಂದಿಗೆ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಹಾಗೂ ಮಾದವ ತೀರ್ಥ ಸಂಸ್ಥಾನದ ಕಿರಿಯ ಶ್ರೀಪಾದರ ಉಪಸ್ಥಿತಿಯಲ್ಲಿ ಭವ್ಯ ಶೋಭಾ ಯಾತ್ರೆ ನಡೆಯಿತು. ನಂತರ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಪುರಂದರದಾಸರ ಕೀರ್ತನೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಪರ್ಯಾಯ ಶ್ರೀಪಾದದ್ವಯರು ಮತ್ತು ಮಾದವ ತೀರ್ಥ ಸಂಸ್ಥಾನದ ಕಿರಿಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಹಿಂದುಸ್ಥಾನಿ ಗಾಯಕ ಪ್ರದೀಪ್ ಸಪ್ತಸ್ವರ ಕುಕ್ಕುಡೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಿತು. ದಾಸಸಾಹಿತ್ಯ ಪ್ರಾಜೆಕ್ಟ್ ಟಿ.ಟಿ.ಡಿ ಇವರ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ವಿದುಷಿ ಸಂಧ್ಯಾ ಶ್ರೀನಾಥ್ ಇವರಿಂದ ‘ದಾಸವಾಣಿ’ ಕಾರ್ಯಕ್ರಮ ಮಧ್ವ ಮಂಟಪದಲ್ಲಿ ನಡೆಯಿತು. ವಿದ್ವಾನ್ ವೆಂಕಟ ನರಸಿಂಹಾಚಾರ್ ಜೋಷಿ, ಹುಬ್ಬಳ್ಳಿ ಇವರಿಂದ ‘ಶ್ರೀ ಪುರಂದರೋಪನಿಷತ್’ ವಿಶೇಷ ಪ್ರವಚನ ರಾಜಾಂಗಣದಲ್ಲಿ ನಡೆಯಿತು.
ವಿಶೇಷ ನಂಟು: ಉಡುಪಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರಿಗೂ ಶ್ರೀ ಪುರಂದರದಾಸರಿಗೂ ವಿಶೇಷ ನಂಟು. ಉಡುಪಿ ಶ್ರೀ ಕೃಷ್ಣ ಮತ್ತು ಪ್ರಾಣ ದೇವರನ್ನು ತಮ್ಮ ಅನೇಕ ಕೀರ್ತನೆಗಳಲ್ಲಿ ವರ್ಣಿಸಿ ಸ್ತುತಿಸಿರುವ ಪುರಂದರದಾಸರು ಇಲ್ಲಿನ ಚಂದ್ರೇಶ್ವರ ಅನಂತೇಶ್ವರ ಮತ್ತು ಮಧ್ವ ಸರೋವರವನ್ನು ವರ್ಣಿಸಿದ್ದಾರೆ. ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಪರ್ಯಾಯ ಮಠದಿಂದ ಶತಕಂಠ ಗಾಯನ ಆಯೋಜಿತಗೊಂಡಿತ್ತು. ಸುಗುಣ ಶ್ರೀ ಭಜನಾ ಮಂಡಳಿಯ ಸುಮಾರು 600 ಸ್ತ್ರೀಯರು ಶಾಂತ ಹೆಬ್ಬಾರ್ ಅವರ ನೇತೃತ್ವದಲ್ಲಿ ಸುಮಾರು 3 ಗಂಟೆಗಳ ಕಾಲ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು. ಶ್ರೀ ವಾದಿರಾಜತೀರ್ಥರೊಂದಿಗೆ ರಾಜಾಂಗಣದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರ ಸಂಕೀರ್ತನೆಯಲ್ಲಿ ತೊಡಗಿದ್ದ ಘಟನೆಯನ್ನು ಸ್ಮರಿಸಲಾಯಿತು.