ಉಡುಪಿ, ಫೆ.4: ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಭೀಷ್ಮ ಸೋಮಶೇಖರ್ ಭಟ್ ಭಾನುವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಬಿಜೆಪಿಯ ಹೈಕಮಾಂಡ್ ನಾಯಕರಿಗೆ ಅತ್ಯಂತ ಆಪ್ತರಾಗಿದ್ದರು. 1975 ರಿಂದ 1977 ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೋಮಶೇಖರ್ ಭಟ್ ಅವರು 11 ತಿಂಗಳ ಕಾಲ ಬಂಧನದಲ್ಲಿದ್ದರು. ಡಾ. ವಿ.ಎಸ್. ಆಚಾರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸೋಮಣ್ಣ ಅವರ ಗರಡಿಯಲ್ಲಿ ಪಳಗಿದ್ದರು. ಸೋಮವಾರ ಬೆಳಿಗ್ಗೆ ಅವರ ಕಾಡಬೆಟ್ಟು ನಿವಾಸದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಗಣ್ಯರ ಸಂತಾಪ: ನನ್ನ ಮಾರ್ಗದರ್ಶಕರೂ, ರಾಜಕೀಯ ಗುರುಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಟ್ಟಾಳು, ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರೂ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುತ್ಸದ್ಧಿ ಎಂ. ಸೋಮಶೇಖರ್ ಭಟ್ ರವರು ದೈವಾಧೀನರಾಗಿರುವ ಸುದ್ದಿ ತೀವ್ರ ದುಃಖ ತಂದಿದೆ. ರಾಷ್ಟ್ರೀಯವಾದಿ ಚಿಂತನೆಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು, ಸಾವಿರಾರು ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ ‘ಸೋಮಣ್ಣ’ ನವರ ವ್ಯಕ್ತಿತ್ವ ನಮಗೆಲ್ಲ ಸದಾ ಪ್ರೇರಣೆಯಾಗಲಿದೆ. ಅಗಲಿದ ಹಿರಿಯ ಚೇತನಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ. ಕುಟುಂಬದ ಬಂಧುಗಳಿಗೆ, ಅವರ ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಸಂತಾಪ ಸೂಚಿಸಿದ್ದಾರೆ.