ಕುಂದಾಪುರ, ಫೆ.4: ಪರೀಕ್ಷೆ ಎಂದರೆ ಹೋರಾಡಲು ಯುದ್ಧವು ಅಲ್ಲ. ಸಂಭ್ರಮಿಸಲು ಹಬ್ಬವೂ ಅಲ್ಲ. ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ಆಗಿದೆ. ಹಾಗಾಗಿ ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಹೇಳಿದರು. ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಗಂಗೊಳ್ಳಿಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಸಿದ್ಧತಾ ಮಾರ್ಗದರ್ಶಿ ಕಾರ್ಯಕ್ರಮ ‘ಪಯಣ’ ದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾರ್ಗದರ್ಶನ ನೀಡುತ್ತಾ ಮಾತನಾಡಿದರು.
ಎಷ್ಟನ್ನು ಓದಿಕೊಂಡಿರುವಿರಿ ಎನ್ನುವುದಕ್ಕಿಂತ ಏನನ್ನು ಓದಿರುವಿರಿ ಮತ್ತು ಎಷ್ಟು ಅರ್ಥ ಮಾಡಿಕೊಂಡಿರುವಿರಿ ಎನ್ನುವುದು ಮುಖ್ಯ. ಎಲ್ಲಾ ವಿಷಯಗಳಿಗೂ ಸಮಾನ ಆದ್ಯತೆ ನೀಡುವುದನ್ನು ಮರೆಯಬಾರದು ಎಂದು ಅವರು ಹೇಳಿದರು.
ಶಿವಮೊಗ್ಗದ ಹಿರಿಯ ನಾಗರಿಕರ ಸಹಾಯವಾಣಿಯ ಕಾನೂನು ಸಲಹೆಗಾರರಾದ ಅನಂತ ಗಂಗೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ.ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಶುಭ ಹಾರೈಸಿದರು. ಬಿಲ್ಲವರ ಹಿತ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಜಿ. ಕೆ.ವೆಂಕಟೇಶ್ ಕೊಡೇರಿಮನೆ ಸ್ವಾಗತಿಸಿದರು. ಸನ್ನಿಧಿ ಹೊಳ್ಳ ಮತ್ತು ದೀಕ್ಷಾ ಪೂಜಾರಿ ಪ್ರಾರ್ಥಿಸಿದರು. ಹರ್ಷಿತಾ ಎಸ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಜಿ.ಎ.ಆರ್ ಲಕ್ಷ್ಮಣ ವಂದಿಸಿದರು.