Monday, January 20, 2025
Monday, January 20, 2025

ಕಲ್ಯಾ ಶಾಲೆಯಲ್ಲಿ ಪ್ರಾಂಜಲ್ ಸ್ಮಾರಕ ಲೋಕಾರ್ಪಣೆ

ಕಲ್ಯಾ ಶಾಲೆಯಲ್ಲಿ ಪ್ರಾಂಜಲ್ ಸ್ಮಾರಕ ಲೋಕಾರ್ಪಣೆ

Date:

ಉಡುಪಿ, ಜ. 29: ಕಾರ್ಕಳ ತಾಲೂಕಿನ ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ಹುತಾತ್ಮ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಸ್ಮಾರಕದ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಿತು. ಸ್ಮಾರಕ ಲೋಕಾರ್ಪಣೆ ಮಾಡಿದ ಕ್ಯಾಪ್ಟನ್ ಪ್ರಾಂಜಲ್ ಅವರ ತಂದೆ ಎಂ ವೆಂಕಟೇಶ್ ಮತ್ತು ತಾಯಿ ಅನುರಾಧಾ ಅವರು ಈ ಭಾವಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿ ಆದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೆಂಕಟೇಶ್ ಮಾತನಾಡಿ, ದೇಶಸೇವೆಗೆ ಮಿಗಿಲಾದ ವೃತವೇ ಇಲ್ಲ. ನಮ್ಮ ಒಬ್ಬನೇ ಮಗನನ್ನು ದೇಶಕ್ಕಾಗಿ ಅರ್ಪಣೆ ಮಾಡಿದ ಬಗ್ಗೆ ನಮಗೆ ಹೆಮ್ಮೆ ಇದೆ. ಆತನಿಗೆ ಸಣ್ಣ ಪ್ರಾಯದಲ್ಲಿಯೇ ರಾಷ್ಟ್ರಭಕ್ತಿ ಮತ್ತು ಸೇನೆಯ ಬಗ್ಗೆ ಅಭಿಮಾನಗಳು ರಕ್ತದಲ್ಲಿಯೇ ಬಂದಿದ್ದವು. ಇಂದು ನಾವು ಪ್ರಾಂಜಲ್ ಹೆತ್ತವರು ಎಂದು ಹೇಳುವಾಗ ತುಂಬಾ ಹೆಮ್ಮೆ ಅನ್ನಿಸುತ್ತದೆ ಎಂದರು.

ಪ್ರಾಂಜಲ್ ತಾಯಿ ಅನುರಾಧಾ ಮಾತನಾಡಿ, ನಮ್ಮ ಮಗ ಬಾಲ್ಯದಿಂದಲೂ ಭಿನ್ನವಾಗಿ ಯೋಚನೆ ಮಾಡುತ್ತಿದ್ದ. ಆತನು ಗೆಳೆಯರ ಜೊತೆಗೂ ತುಂಬಾ ಅನ್ಯೋನ್ಯವಾಗಿ ಇರುತ್ತಿದ್ದನು. ನಾವು ಧೈರ್ಯ ಕಳೆದುಕೊಂಡಾಗ ನಮಗೇ ಆತನು ಧೈರ್ಯ ಹೇಳಿದ ಉದಾಹರಣೆಗಳು ಇವೆ. ಪ್ರಾಂಜಲ್ ಇಂದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ನಾಡಿಗೇ ಹೆಮ್ಮೆ ಎಂದರು. ಪ್ರಾಂಜಲ್ ಅವರ ಗುರುಗಳಾದ ವೆಂಕಟ್ ರಾವ್ ತಮ್ಮ ಶಿಷ್ಯನ ಅನನ್ಯ ಗುಣಗಳನ್ನು ನೆನಪಿಸಿಕೊಂಡರು.

ಸಂಸ್ಮರಣ ಭಾಷಣ ಮಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್ ಅವರು, ಪ್ರಾಂಜಲ್ 29 ವರ್ಷಗಳಲ್ಲಿ ನೂರು ವರ್ಷಗಳ ಸಾಧನೆ ಮಾಡಿ ನಿರ್ಗಮಿಸಿದ್ದಾರೆ. ಅಂತಹವರು ಯುವಜನತೆಗೆ ಆದರ್ಶ ಆಗಬೇಕು ಎಂದು ಹೇಳಿದರು.

ಕಾರ್ಕಳ ಮತ್ತು ಮೂಡುಬಿದರೆ ತಾಲೂಕುಗಳ ನಿವೃತ್ತ ಸೈನಿಕರ ವೇದಿಕೆಯ ಅಧ್ಯಕ್ಷ ಕ್ಯಾಪ್ಟನ್ ವಿಜಯ್ ಫೆರ್ನಾಂಡಿಸ್ ಪ್ರಾಂಜಲ್ ಅವರ ಭಾರತೀಯ ಸೇನೆಯ ಕೊಡುಗೆಗಳನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಪ್ರಾಂಜಲ್ ಹೆತ್ತವರಾದ ವೆಂಕಟೇಶ್ ಮತ್ತು ಅನುರಾಧಾ ಅವರನ್ನು ಶಾಲೆಯ ಶತಮಾನೋತ್ಸವ ಸಮಿತಿ ಹಾಗೂ ಪೂರ್ವ ವಿದ್ಯಾರ್ಥಿಗಳ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬೆಳ್ತಂಗಡಿಯ ಹುತಾತ್ಮ ಯೋಧ ಏಕನಾಥ ಶೆಟ್ಟಿ ಅವರ ಧರ್ಮಪತ್ನಿ ಜಯಂತಿ ಶೆಟ್ಟಿ ಅವರನ್ನು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು. ಪಂಚಾಯತ್ ಅಧ್ಯಕ್ಷೆ ಪೂಜಾ ಕುಮಾರಿ ಸಭಾಧ್ಯಕ್ಷತೆ ವಹಿಸಿದ್ದರು. ತುಳುನಾಡಿನ ಮಹೋನ್ನತ ಸಮಾಜಸೇವಕ ರವಿ ಕಟಪಾಡಿ ಅವರನ್ನೂ ಈ ಸಂದರ್ಭದಲ್ಲಿ ಉಭಯ ಸಮಿತಿಗಳ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಕಳ ಮತ್ತು ಮೂಡಬಿದ್ರೆ ತಾಲೂಕುಗಳ ಮೂವತ್ತಕ್ಕೂ ಹೆಚ್ಚು ನಿವೃತ್ತ ಸೈನಿಕರನ್ನು ಶಾಲು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ದಾನಿಗಳಾದ ಹರ್ಷ ಎಸ್ ಸಾಲಿಯಾನ್ ಮತ್ತು ಶತಮಾನದ ಆಯೋಜಕರಲ್ಲಿ ಒಬ್ಬರಾದ ಭಾರತೀ ಉಮೇಶ್ ಕೋಟ್ಯಾನ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಊರಿನ ಹಿರಿಯರಾದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಗುರ್ಮೆದ ಬೈಲು, ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರವಿದಾಸ್ ಕುಡ್ವ, ಪಂಚಾಯತ್ ಉಪಾಧ್ಯಕ್ಷರಾದ ಹರಿಜೀವನ್ ಶೆಟ್ಟಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಆಶಾ, ಶಾಲೆಯ ಪೂರ್ವ ವಿದ್ಯಾರ್ಥಿ ಮತ್ತು ದಾನಿ ನ್ಯಾಯವಾದಿ ಡಿ.ಕೆ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಮಾರಕಕ್ಕೆ ಗೌರವ ರಕ್ಷೆ ಸಲ್ಲಿಸಿದರು.

ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಮಹಾದಾನಿ ಬಲ್ಯಾರದಡ್ದು ಲಕ್ಷ್ಮೀ ಕೃಷ್ಣ ಶೆಟ್ಟಿ ಅವರ ಪುತ್ತಲಿಯನ್ನು ಅವರ ಕುಟುಂಬದ ಹಿರಿಯರಾದ ರತ್ನಾ ಶೆಟ್ಟಿ ಅವರು ಅನಾವರಣ ಮಾಡಿದರು. ಗೌರವ ರಕ್ಷೆಯಲ್ಲಿ ಸಹಕಾರ ನೀಡಿದ ಭುವನೇಂದ್ರ ಕಾಲೇಜಿನ ಬ್ಯಾಂಡ್ ಸೆಟ್ ಮತ್ತು ಕ್ಯಾಡೆಟಗಳನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ ಸ್ವಾಗತಿಸಿ, ಶತಮಾನೋತ್ಸವ ಸಮಿತಿಯ ಸಂಚಾಲಕ ಯತೀಶ್ ಕೋಟ್ಯಾನ್ ವಂದಿಸಿದರು. ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಗಲಿದ ಸೈನಿಕನಿಗೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾರ್ಕಳದ ಆನೆಕೆರೆಯ ಹುತಾತ್ಮ ಸ್ಮಾರಕದಿಂದ ಕಲ್ಯಾ ಶಾಲೆಯವರೆಗೆ ನೂರಾರು ವಾಹನಗಳ ಬೃಹತ್ ರಾಲಿ ನಡೆಯಿತು. ವೆಂಕಟೇಶ್ ದಂಪತಿಗಳನ್ನು ತೆರೆದ ವಾಹನದಲ್ಲಿ ಶಾಲೆಗೆ ಕರೆತರಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!