ಬ್ರಹ್ಮಾವರ, ಜ.27: ಬ್ರಹ್ಮಾವರ ತಾಲ್ಲೂಕಿನ, ಪಡುಹೋಬಳಿಯ ಕಾರ್ಕಡ ಗ್ರಾಮದ ನಾಗೇಶ್ವರ ಸೋಮಯಾಜಿಯವರ ಜಮೀನಿನಲ್ಲಿರುವ ಶಾಸನವನ್ನು ಕಂಚಾರ್ತಿ ರಾಜೇಶ್ವರ ಉಪಾಧ್ಯಾಯರವರ ಮಾಹಿತಿಯ ಮೇರೆಗೆ ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ ಇಲ್ಲಿನ ಪುರಾತತ್ವ ವಿಭಾಗದ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ-ಚಂದ್ರ ಮತ್ತು ಇಕ್ಕೆಲಗಳಲ್ಲಿ ನಂದಿ, ರಾಜಕತ್ತಿ ಮತ್ತು ದೀಪಕಂಬದ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಸುಮಾರು 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಾಗಿರುವ ಈ ಶಾಸನವು ವಿಜಯನಗರದ ತುಳುವ ಮನೆತನ ದೊರೆ ಕೃಷ್ಣದೇವರಾಯ ನ ಕಾಲಕ್ಕೆ ಸೇರುತ್ತದೆ.
ಶ್ರೀ ಗಣಾಧಿಪತಯೆಂ ನಮ ಎಂಬ ಶುಭ ಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರ್ಷ 1440 ರ (ಸಾ.ಶ.ವ 1518) ಬಹುಧಾನ್ಯ ಸಂವತ್ಸರದ ಭಾದ್ರಪದ ಬಹುಳ ಎಂಬ ಕಾಲಮಾನವನ್ನು ಉಲ್ಲೇಖಿಸಿದ್ದು, ಈ ಸಂದರ್ಭದಲ್ಲಿ ಕೃಷ್ಣದೇವರಾಯನು (1509-1529) ವಿಜಯನಗರಿಯ ಸಿಂಹಾಸನದಲ್ಲಿದ್ದು ಬಾರಕೂರ ರಾಜ್ಯವನ್ನು ವಿಜಯಪ್ಪ ಒಡೆಯ (ಸಾ.ಶ.ವ 1519-20) ನೋಡಿಕೊಳ್ಳುತ್ತಿದ್ದ ಎಂಬ ಮಾಹಿತಿಯನ್ನು ನೀಡುತ್ತದೆ. ಶಾಸನದಲ್ಲಿ ಧಾರಪೂರ್ವಕವಾಗಿ ಧಾರೆಯೆರೆದು ಕೊಟ್ಟ ದಾನ ಎಂಬ ಉಲ್ಲೇಖವಿದ್ದು, ದಾನ ವಿವರಣ ಭಾಗವು ತೃಟಿತಗೊಂಡಿದ್ದರಿಂದ ದಾನವನ್ನು ಯಾರು ಮತ್ತು ಯಾರಿಗೆ ನೀಡಿದ್ದರೆಂದು ತಿಳಿದು ಬರುವುದಿಲ್ಲ. ಶಾಸನದಲ್ಲಿ ಕರಣಿಕ ಮಲ(*)ಸರ, ಅಂಣ ಎಂಬ ವ್ಯಕ್ತಿಗಳ ಉಲ್ಲೇಖವಿದ್ದು, ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.
ಕ್ಷೇತ್ರಕಾರ್ಯಕ್ಕೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇಲ್ಲಿನ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ, ಸತ್ಯನಾರಾಯಣ ಸೋಮಯಾಜಿ ಮತ್ತು ಕೆ.ವಿ. ಸುಬ್ರಮಣ್ಯಂ ಅವರು ಸಹಕಾರ ನೀಡಿರುತ್ತಾರೆ.