ಕೋಟ, ಜ. 27: ಪಂಚಾಯತ್ ರಾಜ್ ಸಬಲೀಕರಣಕ್ಕೆ ಹೊಳಪು ಕಾರ್ಯಕ್ರಮ ಸಹಕಾರಿಯಾಗಿದ್ದು, ಪಕ್ಷಬೇಧ ಮರೆತು ನಾವೆಲ್ಲರೂ ಒಂದೇ ತಂಡ ಎನ್ನುವ ಭಾವನೆ ಮೂಲಕ ತಂಡದ ಗೆಲುವಿಗಾಗಿ ಪಣತೊಟ್ಟು ಸಂಭ್ರಮದಿಂದ ಭಾಗವಹಿಸುತ್ತಿರುವುದು ಸಂತಸದ ವಿಷಯ, ಇಂತಹ ಕಾರ್ಯಕ್ರಮಗಳು ದೇಶಕ್ಕೆ ಮಾದರಿ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧ್ಯಕ್ಷ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಆಶ್ರಯದಲ್ಲಿ ನಡೆಯುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆ ಹೊಳಪು-೨೦೨೪ (ಗ್ರಾಮ ಸರಕಾರದ ದಿಬ್ಬಣ) ಕಾರ್ಯಕ್ರಮದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಗಟ್ಟಿತನದತ್ತ ಒಂದು ಹೆಜ್ಜೆ ಹೊಳಪು ಕಾರ್ಯಕ್ರಮ. ಹಬ್ಬದಂತೆ ಕಾರ್ಯಕ್ರಮದಲ್ಲಿ ಜೊತೆಗೂಡಿ ಸಂಭ್ರಮಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್, ವಿವೇಕ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದ, ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನದ ಸದಸ್ಯರು ಮತ್ತಿತ್ತರರು ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.