ಉಡುಪಿ, ಜ.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು. ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನಕಾರರು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದರೊಂದಿಗೆ ಸಮಾಜದಲ್ಲಿನ ಮೌಢ್ಯ, ಕಂದಾಚಾರದ ವಿರುದ್ಧ ಹೋರಾಡಿದ್ದಾರೆ. ಇಂತಹ ವಚನಕಾರರ ಜಯಂತಿ ಆಚರಣೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಸಾದ್ಯ ಎಂದರು. ಕಾರ್ಯಕ್ರಮದಲ್ಲಿ ಜಿ.ಪಿ ಪ್ರಭಾಕರ ತುಮರಿ ಉಪನ್ಯಾಸ ನೀಡಿ, ವಚನಕಾರರು ಹಾಗೂ ದಾಸರು ಸಮಾಜಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹಾಗೂ ತತ್ವಗಳನ್ನು ಸಕಾಲದಲ್ಲಿ ಬೋಧಿಸಿ ಸಮಾಜ ಸುಧಾರಣೆ ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಮುಖ್ಯವಾಗಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಶಿವಭಕ್ತಿ ಮತ್ತು ವಿಷ್ಣು ಭಕ್ತಿಯ ಮೂಲಕವೇ ಅಂತರಂಗದಲ್ಲಿ ಬೆಳಕು ಮೂಡಿಸುತ್ತ ಬಂದಿದ್ದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗಗಳನ್ನು ಪಳಗಿಸುವ ಕಲೆಯನ್ನು ಈ ವಚನ ತತ್ವಜ್ಞಾನ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಇದರ ಅಧ್ಯಯನ ಮಾಡುವ ಮೂಲಕ ತಮ್ಮ ವ್ಯಕ್ತಿತ್ವ ಬೆಳೆಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮೊಗವೀರ ಮಹಾಮಂಡಲದ ಜಯ ಸಿ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ನಳಿನಾ ದೇವಿ ಎಮ್.ಆರ್ ನಿರೂಪಿಸಿ, ಹಿರಿಯ ಉಪನ್ಯಾಸಕಿ ವೀಣಾ ಡಿ ನಾಯಕ್ ವಂದಿಸಿದರು.