ಉಡುಪಿ, ಜ.17: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ ‘ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ’ ಛಾಯಾಚಿತ್ರ ಪ್ರದರ್ಶನವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜನವರಿ 18 ರಂದು ಉದ್ಘಾಟನೆಗೊಳ್ಳಲಿದೆ.
ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕುರಿತು ನಿರ್ಮಿಸಿದ ಛಾಯಾಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಫೀನಿಕ್ಸ್ ವೆಂಕಟಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯ ಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಜರಗಲಿದೆ.
ರಿಸ್ಸೋ ಕೊಸೈ ಕಯ್ ಜಪಾನ್, ನಿಯೋಜಿತ ಅಧ್ಯಕ್ಷ ರೆ. ಕೋಶೊ ನಿವಾನೋ, ಆಸ್ಟ್ರೇಲಿಯಾ, ವಿಕ್ಟೋರಿಯಾದ ಮಾಜಿ ಸಚಿವ ಲ್ಯೂಕ್ ಡನೆಲನ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯಪಟ್ಟದ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವದಿಸಲಿದ್ದಾರೆ. ಸಾರ್ವಜನಿಕರು ಜನವರಿ 19 ರಿಂದ ಜನವರಿ 25 ರವರೆಗೆ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.