ಉಡುಪಿ, ಡಿ.24: ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಶುಭ ಆಶೀರ್ವಾದದೊಂದಿಗೆ ಉಡುಪಿಯ ಗೀತಾಮಂದಿರದಲ್ಲಿ ಗೀತಾಜಯಂತಿ ಉತ್ಸವ ನಡೆಯಿತು. ವಿದ್ವಾನ್ ಶತಾವಧಾನಿ ಡಾ. ರಾಮನಾಥ ಆಚಾರ್ಯ ದೀಪ ಬೆಳಗಿಸಿ ಶ್ರೀ ಕೃಷ್ಣನ ಗೀತೆಯ ಸಾರದ ಬಗ್ಗೆ ತಿಳಿಸಿ, ಎಲ್ಲರೂ ಜೀವನದಲ್ಲಿ ಗೀತೆಯನ್ನು ಬಳಸಿ ಉತ್ತಮ ಜೀವನವನ್ನು ಅನುಭವಿಸಿ ಎಂದು ಸಂದೇಶ ನೀಡಿದರು. ಹಿರಿಯ ವಿದ್ವಾಂಸರಾದ ಮಧ್ವರಮಣ ಆಚಾರ್ಯ ಮಾತನಾಡಿ, ಪೋಷಕರು ಈಗಲೇ ಮಕ್ಕಳಲ್ಲಿ ಗೀತಾಭ್ಯಾಸವನ್ನು ಮಾಡಿಸಿ, ಹಿಂದೂ ಸಂಸ್ಕೃತಿಯನ್ನು ಉಳಿಸುವಂತಾಗಲಿ ಎಂದರು.
ಉಡುಪಿಯ ಸುಮಾರು 24 ಶಾಲೆಗಳ 800 ವಿದ್ಯಾರ್ಥಿಗಳಿಂದ ಗೀತಾ ಕಂಠ ಸ್ಪರ್ಧೆ ನಡೆಸಿ, 175 ವಿಜೇತರಿಗೆ ಪ್ರಮಾಣಪತ್ರದೊಂದಿಗೆ ಬಹುಮಾನ ನೀಡಲಾಯಿತು. ಗೀತಾ ಮಾತೆಯರಿಂದ ಗೀತಾ ಪಾರಾಯಣ ನಡೆಯಿತು. ರಮೇಶ್ ಭಟ್ ಕೆ ಕಾರ್ಯಕ್ರಮ ನಿರೂಪಿಸಿ ಸಂಯೋಜಿಸಿದರು. ಶ್ರೀಮಠದ ವಿಷ್ಣುಮೂರ್ತಿ ಉಪಾಧ್ಯ ಸ್ವಾಗತಿಸಿ, ರವೀಂದ್ರ ಆಚಾರ್ಯ ವಂದಿಸಿದರು.