ಮಣಿಪಾಲ, ಡಿ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕಸ್ತೂರ್ಬಾ ಆಸ್ಪತ್ರೆಯ 500 ಕ್ಕೂ ಹೆಚ್ಚು ಆರೋಗ್ಯೇತರ ಮಹಿಳಾ ಸಿಬ್ಬಂದಿಗಳು ಕಾರ್ಯಕ್ರಮದ ಫಲಾನುಭವಿಗಳಾಗಿ ಭಾಗವಹಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಮತ್ತು ಅಡಿಶನಲ್ ಪ್ರೊಫೇಸರ್ ಡಾ. ರಂಜಿತಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.
ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದಿವ್ಯಾ ಪೈ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಅಫ್ರಾಜ್ ಜಹಾನ್ ಅವರು ಡಾ. ರತ್ನಾ ಜೆ, ಡಾ. ಸುಮಾ ರಾಮಕೃಷ್ಣ, ಡಾ. ವೈಷ್ಣಾ ಶಂಕರ್ ಮತ್ತು ಡಾ. ಶ್ರೀಕಾ ಅವರೊಂದಿಗೆ ತಿಂಗಳಾದ್ಯಂತ ಆಸ್ಪತ್ರೆಯಲ್ಲಿ ವಿವಿಧ ಅವಧಿಗಳನ್ನು ನಡೆಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಸುಚೇತಾ ನಾಯಕ್ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಕೀಯ ಸಮಾಜ ಸೇವಕರಾದ ಪುಷ್ಪಾ, ಆಶಾ ಮತ್ತು ಚಿತ್ರಾ ಸಹಕರಿಸಿದರು.
ಸ್ವಯಂ-ಸ್ತನ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್‌ನ ಲಕ್ಷಣಗಳನ್ನು ಮೊದಲೇ ಪತ್ತೆಹಚ್ಚುವ ಮಹತ್ವವನ್ನು ತಿಳಿಸಲಾಯಿತು. ಸ್ವಯಂ ಸ್ತನ ಪರೀಕ್ಷೆಗಾಗಿ ಹ್ಯಾಂಡ್ಸ್-ಆನ್ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಫಿಸಿಶಿಯನ್ ಅವರಿಂದ ಸ್ವಯಂ ಸ್ತನ ಪರೀಕ್ಷೆ ಮತ್ತು ವೈದ್ಯರು ಮಾಡುವ ಸ್ತನ ಪರೀಕ್ಷೆಯನ್ನು ವೀಡಿಯೊ ಮೂಲಕ ತೋರಿಸಲಾಯಿತು. ಮಹಿಳಾ ಸಿಬ್ಬಂದಿಯವರನ್ನು ಜ್ಞಾನದೊಂದಿಗೆ ಸಶಕ್ತಗೊಳಿಸುವುದು, ಈ ಕಾಯಿಲೆಗೆ ಸಂಬಂಧಿಸಿದ ಕಳಂಕವನ್ನು ಕಡಿಮೆ ಮಾಡುವುದು ಮತ್ತು ಮುಕ್ತ ಸಂಭಾಷಣೆಗಳನ್ನು ಪ್ರೋತ್ಸಾಹಿಸುವ ಮೂಲಕ ನಿಯಮಿತ ತಪಾಸಣೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.