ಬ್ರಹ್ಮಾವರ, ಡಿ. 18: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಏಸಿ ಸಹಭಾಗಿತ್ವದಲ್ಲಿ ಲಿಂಗ ಸಂವೇದನೆಯ ಕುರಿತು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಮೀಳಾ ವಾಜ್, ಲಿಂಗ ಸಂವೇದನೆಯ ಕಾರ್ಯಕ್ರಮಗಳ ಅಗತ್ಯತೆಯನ್ನು ಹಲವಾರು ಉದಾಹರಣೆಗಳ ಮೂಲಕ ವಿವರಿಸುತ್ತಾ, ದೈಹಿಕ ಲಕ್ಷಣಗಳಲ್ಲಿನ ವ್ಯತ್ಯಾಸ ಲಿಂಗ ತಾರತಮ್ಯದ ಮೂಲವಲ್ಲ, ಲಿಂಗ ತಾರತಮ್ಯದ ಮೂಲ ಮನಸ್ಸು ಎಂದು ತಿಳಿಸಿದರು.
ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿಗಳಾದ ಲೀಲಾವತಿ ಹಾಗೂ ರಾಜು ಕಿರು ಪ್ರಹಸನದ ಮೂಲಕ ಲಿಂಗ ಸಂವೇದನೆಯನ್ನು ಅಭಿವ್ಯಕ್ತಪಡಿಸಿದರು. ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಶೋಭಾ ಆರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಐಕ್ಯೂಏಸಿ ಸಂಚಾಲಕಿ ವಿದ್ಯಾ ಪಿ., ರೆಡ್ ಕ್ರಾಸ್ ಘಟಕ 2ರ ಅಧಿಕಾರಿ ಗಂಗಾಧರಯ್ಯ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ವಿದ್ಯಾರ್ಥಿಗಳಾದ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ನೇತ್ರಾವತಿ ವಂದಿಸಿದರು.