ಉಡುಪಿ, ಡಿ 16: ಜೀವನದಲ್ಲಿ ಭಗವದ್ಗೀತೆಯ ಸ್ಫೂರ್ತಿಯ ಅಧ್ಯಾಯಗಳನ್ನು ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ. ಭಗವದ್ಗೀತೆ ಜೀವನಕ್ಕೆ ಉತ್ತಮ ಮಾರ್ಗದರ್ಶಿ ಎಂದು 4 ನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿಯ ಎಂಜಿಎಂ ಕಾಲೇಜಿನ ನವೀಕೃತ ಮುದ್ದಣ ಮಂಟಪದ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ತೋನ್ಸೆ ಮಾಧವ ಅನಂತ್ ಪೈ ಬಹಳ ವಿಶೇಷವಾಗಿ ಮಾತನಾಡಿಸಿದ್ದರು. ಎಂಜಿಎಂ ಕಾಲೇಜು ದೇಶದ ಹೆಮ್ಮೆಯಾಗಿದೆ. ಭಾರತ ಅಮೃತ ಮಹೋತ್ಸವವನ್ನು ಕಳೆದ ವರ್ಷ ಆಚರಿಸಿತು. ಎಂಜಿಎಂ ಕಾಲೇಜು ಈ ವರ್ಷ ಆಚರಿಸುತ್ತಿದೆ. ಮುಂದೆ ಶತಮಾನ ವರ್ಷವನ್ನು ಆಚರಿಸಬೇಕು ಅದಕ್ಕೂ ನಾವು ಬರುವ ಹಾಗೆ ಆಗಬೇಕು. ಉಡುಪಿಯ ಸಂಸ್ಕೃತಿ ಬೆಳವಣಿಗೆಯಲ್ಲಿ ಎಂಜಿಎಂ ಪಾತ್ರ ವಹಿಸಿದೆ. ನಮ್ಮ ಪುತ್ತಿಗೆ ಮಠದ ಪರ್ಯಾಯವು ಮಣಿಪಾಲ್ ಸಮೂಹ, ಮನೆಯಿಂದ ನಡೆಯುವ ಪರ್ಯಾಯ ಹಾಗಾಗಿ ನಮ್ಮ ಪರ್ಯಾಯ ಎಂದು ಭಾವಿಸಿ ತಾವೆಲ್ಲರೂ ನಮ್ಮ ಪರ್ಯಾಯಕ್ಕೆ ಬರಬೇಕೆಂದು ನಿಮಗೆ ಆಹ್ವಾನ ನೀಡುತ್ತೇನೆ. ನಾವು ಈ ವರ್ಷ ನಮ್ಮ ಪುತ್ತಿಗೆ ಮಠದ ಪರ್ಯಾಯವನ್ನು ಕೋಟಿ ಗೀತಾ ಲೇಖನಯಜ್ಜ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಭಗವದ್ಗೀತೆ ಜೀವನದ ಗೈಡ್ ಇದ್ದ ಹಾಗೆ. ಅದು ನಮಗೆ ಜೀವನವನ್ನು ಹೇಗೆ ಸಾಧಿಸಬೇಕು ಎಂದು ಹೇಳಿಕೊಡುತ್ತದೆ.
ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣದೊಂದಿಗೆ ಜೀವನವನ್ನು ಸಾಧಿಸುವ ವಿದ್ಯೆಯು ಬೇಕು. ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಕೆಯಲ್ಲಿ ತೊಡಗಿರುತ್ತೀರಿ. ಮೊಬೈಲ್ ದೆಸೆಯಿಂದ ನಮ್ಮ ಆಚಾರ ವಿಚಾರ ದೂರ ಹೋಗುತ್ತಿದೆ. ಮೊಬೈಲ್ ನೋಡುವುದನ್ನು ಸ್ವಲ್ಪ ಕಡಿಮೆ ಮಾಡಿ ದಿನಕ್ಕೆ ಒಂದು ಗೀತೆಯನ್ನು ವಿದ್ಯಾರ್ಥಿಗಳು ಓದಬೇಕು ಬರೆಯಬೇಕು. ನಿಮಗೆ ಮುಂದಿನ ಭವಿಷ್ಯಕ್ಕೆ ಜೀವನ ಸಾಗಿಸಲು ಗೀತೆಯೂ ಅತ್ಯಂತ ಮುಖ್ಯವಾಗಿರುತ್ತದೆ. ಅದು ನಿಮ್ಮನ್ನು ಮೊಬೈಲ್ ಜಿಪಿಎಸ್ ನ ಹಾಗೆ ಜೀವನದ ದಾರಿಗೆ ಕೈಹಿಡಿದು ಕರೆದುಕೊಂಡು ಬರುತ್ತದೆ ಎಂದು ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ನಮ್ಮಲ್ಲಿನ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆ ಒಂದು ದೊಡ್ಡ ಪರಿಹಾರ. ಇಂದು ಜಗತ್ತಲ್ಲಿ ಯಾರು ಮಹಾತ್ಮರು ಎನಿಸಿಕೊಂಡಿದ್ದಾರೋ, ಯಾರು ತಮ್ಮ ಜೀವನದಲ್ಲಿ ಯಶಸ್ವಿಯಾಗಿದ್ದಾರೋ ಅವರ ಯಶಸ್ಸಿನ ಹಿಂದೆ ಭಗವದ್ಗೀತೆಯ ಸೂತ್ರಗಳಿವೆ. ಒಬ್ಬ ವಿಜ್ಞಾನಿ, ಉದ್ಯಮಿ, ಮನೋವೈದ್ಯ ಎಲ್ಲರೂ ಈ ಗ್ರಂಥವನ್ನು ಪಾಲಿಸುತ್ತಾರೆ. ಸಾಮಾನ್ಯ ವ್ಯಕ್ತಿ ಮಹಾಪುರುಷ ಹಾಗೂ ಸಾಧಕರೆಲ್ಲರೂ ಗೀತೆಯ ಸಾರವನ್ನು ಅನುಸರಿಸಿದ್ದಾರೆ ಎಂದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾದ ಟಿ. ಸತೀಶ್ ಯು. ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮಾಹೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಸಹ ಕುಲಾಧಿಪತಿಗಳು ಹಾಗೂ ಅಧ್ಯಕ್ಷರಾದ ಡಾ. ಹೆಚ್.ಎಸ್.ಬಲ್ಲಾಳ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್. ಎಸ್ ನಾಯ್ಕ್ ಉಪಸ್ಥಿತರಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಸ್ವಾಗತಿಸಿ, ಪ.ಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ವಂದಿಸಿ, ಉಪನ್ಯಾಸಕಿ ದೀಪಾಲಿ ನಿರೂಪಿಸಿದರು.