ಉಡುಪಿ, ಡಿ.12: ತೋಟಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗೆ ವಿಮೆ ಮಾಡಿಸಿದ ಅರ್ಹ ರೈತರ ಖಾತೆಗೆ ನವೆಂಬರ್ 24 ರಿಂದ ವಿಮಾ ಪರಿಹಾರ ಮೊತ್ತ ಜಮಾ ಮಾಡಲಾಗುತ್ತಿರುತ್ತದೆ. ಬ್ರಹ್ಮಾವರ ತಾಲೂಕಿನಲ್ಲಿ ಕಾಳುಮೆಣಸು ಬೆಳೆಯ 35 ಪ್ರಕರಣಗಳಿಗೆ 6.48704 ಲಕ್ಷ ರೂ., ಬೈಂದೂರು ತಾಲೂಕಿನ ಅಡಿಕೆ ಬೆಳೆಯ 1091 ಹಾಗೂ ಕಾಳುಮೆಣಸು ಬೆಳೆಯ 435 ವಿಮಾ ಪ್ರಕರಣಗಳಿಗೆ ಒಟ್ಟು 443.43 ಲಕ್ಷ ರೂ, ಹೆಬ್ರಿ ತಾಲೂಕಿನ ಅಡಿಕೆ ಬೆಳೆಯ 358 ಹಾಗೂ ಕಾಳುಮೆಣಸು ಬೆಳೆಯ 32 ವಿಮಾ ಪ್ರಕರಣಗಳಿಗೆ ಒಟ್ಟು 128.51 ಲಕ್ಷ ರೂ, ಕಾಪು ತಾಲೂಕಿನ ಅಡಿಕೆ ಬೆಳೆಯ 94 ವಿಮಾ ಪ್ರಕರಣಗಳಿಗೆ 24.50 ಲಕ್ಷ ರೂ., ಕಾರ್ಕಳ ತಾಲೂಕಿನ ಅಡಿಕೆ ಬೆಳೆಯ 1180 ಹಾಗೂ ಕಾಳುಮೆಣಸು ಬೆಳೆಯ 83 ವಿಮಾ ಪ್ರಕರಣಗಳಿಗೆ 440.38 ಲಕ್ಷ ರೂ., ಕುಂದಾಪುರ ತಾಲೂಕಿನ ಅಡಿಕೆ ಬೆಳೆಯ 3479 ಹಾಗೂ ಕಾಳುಮೆಣಸು ಬೆಳೆಯ 899 ವಿಮಾ ಪ್ರಕರಣಗಳಿಗೆ 1071.84 ಲಕ್ಷ ರೂ. ಹಾಗೂ ಉಡುಪಿ ತಾಲೂಕಿನ ಅಡಿಕೆ ಬೆಳೆಯ 42 ಹಾಗೂ ಕಾಳುಮೆಣಸು ಬೆಳೆಯ 7 ವಿಮಾ ಪ್ರಕರಣಗಳಿಗೆ ಒಟ್ಟು 11.23 ಲಕ್ಷ ರೂ., ಪರಿಹಾರ ಮೊತ್ತ ಪಾವತಿಯಾಗಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಅಡಿಕೆ ಬೆಳೆಯ 6244 ಮತ್ತು ಕಾಳುಮೆಣಸು ಬೆಳೆಯ 1491 ಸೇರಿದಂತೆ ಒಟ್ಟು 7735 ಪ್ರಕರಣಗಳಿಗೆ 2125.98 ಲಕ್ಷ ರೂ. ಪರಿಹಾರ ಮೊತ್ತವು ವಿಮಾ ಕಂಪನಿಯಿಂದ ಜಮೆ ಮಾಡಲಾಗಿರುತ್ತದೆ. ಆಧಾರ್ ಮಾಹಿತಿ ಸಮರ್ಪಕವಾಗಿರದೇ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದೇ ಹಾಗೂ ನವೆಂಬರ್ 24 ರಂದು ಪಾವತಿಗೆ ಬಾಕಿಯಾಗಿದ್ದ ಅಡಿಕೆ ಬೆಳೆಯ 438 ಹಾಗೂ ಕಾಳುಮೆಣಸು ಬೆಳೆಯ 136 ಪ್ರಕರಣ ಸೇರಿದಂತೆ ಒಟ್ಟು 574 ಪ್ರಕರಣಗಳಲ್ಲಿ ಆಧಾರ್ ಸರಿಪಡಿಸಿಕೊಂಡ ರೈತರ ಪ್ರಕರಣಗಳಿಗೂ ಡಿಸೆಂಬರ್ 9 ರಂದು ವಿಮಾ ಕಂಪನಿಯಿಂದ ವಿಮಾ ಮೊತ್ತ ಜಮೆ ಆಗಿರುತ್ತದೆ. ಖಾತೆಯ ಕ್ರೆಡಿಟ್ ಮಿತಿ ಮೀರಿರುವ 3 ಪ್ರಕರಣಗಳು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಬಾಕಿ ಇರುವ 12 ಪ್ರಕರಣಗಳು, ಆಧಾರ್ ಸಕ್ರಿಯವಾಗಿರದೇ ಇರುವ ಬ್ಯಾಂಕ್ ಖಾತೆಯ 95 ಪ್ರಕರಣಗಳಿಗೆ ವಿಮಾ ಪರಿಹಾರ ಮೊತ್ತ ಪಾವತಿಗೆ ಬಾಕಿ ಇದ್ದು, ವಿಮೆ ಜಮೆ ಆಗದೇ ಇರುವ ರೈತರು ವಿಮೆ ಮಾಡಿಸಿದ ಬ್ಯಾಂಕ್‌ಗೆ ಭೇಟಿ ನೀಡಿ ಖಾತೆ ಸರಿಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.