ಕೋಟ: ಸಾಲಿಗ್ರಾಮ ಸರ್ವಿಸ್ ರಸ್ತೆಗೆ ಸಂಬಂಧಿಸಿದಂತೆ ಹೆದ್ದಾರಿ ಜಾಗೃತಿ ಸಮಿತಿ ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಸಭೆ ನಡೆಸಿ ಕಾಮಗಾರಿ ಆರಂಭಿಸಲು 15 ದಿನದ ಗಡುವು ನೀಡಿದೆ.
ಈ ಕುರಿತು ಮಾತನಾಡಿದ ರಾ.ಹೆ. ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯಿರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ನವಯುಗ ಕಂಪನಿ ಮುಂದಾಗಿದೆ. ಇದು ಎಷ್ಟು ಸರಿ? 2010 ರಲ್ಲಿ ಆರಂಭಗೊಂಡ ಕಾಮಗಾರಿ 2013ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರ ಸೂಚಿಸಿದರೂ 2022 ಆದರೂ ಅರೆಬರೆಯಲ್ಲೆ ನಿಲ್ಲಿಸಿ ಜನಸಾಮಾನ್ಯರ ಜೀವದ ಜೊತೆ ಚಲ್ಲಾಟವಾಡುತ್ತಿದೆ.
ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿ ಯಶಸ್ಸು ಪಡೆದಿದ್ದೇವೆ. ಇದೀಗ ಮತ್ತದೆ ಸನ್ನಿವೇಶ ಎದುರಾಗಿದ್ದು ಮಾರ್ಚ 10ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಬೇಕಾದಿತು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಮಾತನಾಡಿ, ಇದು ನಮ್ಮ ಸ್ವಾರ್ಥಕ್ಕಲ್ಲ ಬದಲಾಗಿ ಜನಸಾಮಾನ್ಯರಿಗೋಸ್ಕರ ಹೋರಾಟಕ್ಕಿಳಿದಿದ್ದೇವೆ. ಅವೈಜ್ಞಾನಿಕ ಕಾಮಗಾರಿಯಿಂದ ಪ್ರಾಣಹಾನಿಯಾಗಿದೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಟೋಲ್‌ಗೆ ಬೀಗ ಜಡಿಯುವುದಾಗಿ ಎಚ್ಚರಿಸಿದರು.
ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಐರೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಲಿಗ್ರಾಮ ಪ. ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಹೇರ್ಳೆ, ಸದಸ್ಯೆ ರತ್ನ ನಾಗರಾಜ್ ಗಾಣಿಗ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್, ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಮತ್ತಿತರರು ಉಪಸ್ಥಿತರಿದ್ದರು. ಹೆದ್ದಾರಿ ಜಾಗೃತಿ ಸಮಿತಿಯ ಪ್ರಶಾಂತ್ ಶೆಟ್ಟಿ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.