ಬ್ರಹ್ಮಾವರ, ಡಿ.8: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಸೋಜನ್ ಕೆ. ಜಿ ಅಂಬೇಡ್ಕರ್ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣದಿಂದಲೇ ವಿಮೋಚನೆ ಎಂಬ ಮಂತ್ರಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಮೂರ್ತಿರೂಪವಾಗಿದ್ದಾರೆ. ಅಂಬೇಡ್ಕರ್ ಅವರಿಂದ ನಾವು ಕಲಿಯಬೇಕಾದ ಪಾಠಗಳ ಕುರಿತು ಅವರ ಜೀವನ ಘಟನೆಗಳನ್ನು ಆಧರಿಸಿ, ಪುಸ್ತಕ ಪ್ರೀತಿ, ಸ್ವಾವಲಂಬನೆ, ಪ್ರತಿರೋಧ ಶಕ್ತಿ, ಭ್ರಾತೃತ್ವ ಭಾವ ಮೊದಲಾದ ಮೌಲ್ಯಗಳು ಅವರ ಆಶಯದ ಭಾರತವನ್ನು ನಿರ್ಮಿಸಲು ನಮಗಿರುವ ಮಾರ್ಗದರ್ಶಕ ಸೂತ್ರಗಳು ಎಂದರು.
ಮರಾಠಿ ಭಾಷೆಯಲ್ಲಿ ಪ್ರಕಟಗೊಂಡ ಬಹುಸಂಖ್ಯೆಯ ದಲಿತ ಆತ್ಮಕಥೆಗಳಲ್ಲಿ ಅಂಬೇಡ್ಕರ್ ಚಿಂತನೆಗಳ ಪ್ರಭಾವವನ್ನು ಗುರುತಿಸಬಹುದು ಎಂದರು. ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮದ ಆಶಯವನ್ನು ತಿಳಿಸಿದರು. ಸಂವಿಧಾನದ ಅರಿವು, ಹಕ್ಕು ಮತ್ತು ಕರ್ತವ್ಯಗಳ ಕುರಿತಾದ ಸ್ಪಷ್ಟ ತಿಳುವಳಿಕೆ, ಯುವ ಸಮುದಾಯ ಅಗತ್ಯವಾಗಿ ತಿಳಿಯಬೇಕಾದ ಅಂಶಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ ಆಚಾರ್ ಅವರು ಅಂಬೇಡ್ಕರ್ ಬರಹಗಳನ್ನು ಹೆಚ್ಚು ಹೆಚ್ಚು ಓದುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಂಬೇಡ್ಕರ್ ಚಿಂತನೆಗಳ ಕುರಿತಾದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ನೀಡಲಾದ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಸಂಘಟಿಸಿದ ಸಾಂಸ್ಕೃತಿಕ ಸಮಿತಿ ಸಂಚಾಲಕ ನಿರಂಜನ್ ಶರ್ಮ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲ ಕರ್ವಾಲೊ ವಂದಿಸಿದರು. ಸುಮಂಗಲ ಸಂವಿಧಾನ ಪೀಠಿಕೆ ವಾಚಿಸಿದರು. ಕಾಲೇಜಿನ ಐಕ್ಯುಎಸಿ ಸಂಚಾಲಕಿ ವಿದ್ಯಾ ಪಿ ಉಪಸ್ಥಿತರಿದ್ದರು.