Wednesday, January 22, 2025
Wednesday, January 22, 2025

ಪುತ್ತಿಗೆ ಪರ್ಯಾಯ ಧಾನ್ಯ ಮುಹೂರ್ತ ವೈಭವ

ಪುತ್ತಿಗೆ ಪರ್ಯಾಯ ಧಾನ್ಯ ಮುಹೂರ್ತ ವೈಭವ

Date:

ಉಡುಪಿ, ಡಿ.6: ಉಡುಪಿಯ‌ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿ‌ಲ್ಲಿ ನಾಲ್ಕನೇ ಬಾರಿ‌ 2024, ಜ.18ರಂದು ಸರ್ವಜ್ಞ ಪೀಠವನ್ನೇರಲಿದ್ದು ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು. ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.8ರಂದು ತಮ್ಮ ಶಿಷ್ಯ‌ ಶ್ರೀ ಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀ ಸುಗುಣೇಂದ್ರತೀರ್ಥರು ಉಡುಪಿ ಪುರಪ್ರವೇಶ ಮಾಡಲಿದ್ದಾರೆ.

ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ ಮಹಾಪೂಜೆ ಸಲ್ಲಿಸಿ, ದೇವತಾ ಪ್ರಾರ್ಥನೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ತೆರಳಿ ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಗರುಢ, ಮಧ್ವ, ಸರ್ವಜ್ಞ ಸಿಂಹಾಸನ, ಭೋಜನ ಶಾಲೆ ಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ, ಗೋಶಾಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ಪುತ್ತಿಗೆ ಮಠಕ್ಕೆ ಮರಳಿ ಬಂದು ತಲೆ ಹೊರೆಯಲ್ಲಿ ಧಾನ್ಯ ಮುಡಿ, ಸ್ವರ್ಣ ಪಲ್ಲಕ್ಕಿಯಲ್ಲಿ ಕಿರು ಮುಡಿಯಿಟ್ಟು ರಥಬೀದಿಯಲ್ಲಿ ಮೆರವಣಿಗೆ ಬಳಿಕ ಶ್ರೀಕೃಷ್ಣಮಠದ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಯಿತು. ಮಹಿಳೆಯರು, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣ ತಾಳ ಕೀರ್ತನೆ ಸಲ್ಲಿಸಿದರು. ವಿವಿಧ ಮಠ, ಉಪಮಠದ ಪ್ರತಿನಿಧಿಗಳು, ವಿದ್ವಾಂಸರಿಗೆ ಗೌರವ, ನವಗ್ರಹ ದಾನ ನೀಡಿದ ಬಳಿಕ ಮರಳಿ ಪುತ್ತಿಗೆ ಮಠಕ್ಕೆ ಬಂದು ವಿಠಲ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಜಯಕರ ಶೆಟ್ಟಿ, ರಂಜನ್ ಕಲ್ಕೂರ, ಬಿ. ಗೋಪಾಲಾಚಾರ್ಯ, ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ಮಂಜುನಾಥ ಉಪಾಧ್ಯ, ಶ್ರೀನಾಗೇಶ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೆ.ಉದಯ ಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಉಪಾಧ್ಯ, ರಾಘವೇಂದ್ರ ಭಟ್, ಮಧ್ವರಮಣ ಆಚಾರ್, ರಾಘವೇಂದ್ರ ತಂತ್ರಿ, ಶ್ರೀಧರ‌ ಉಪಾಧ್ಯ, ವಿದ್ವಾನ್ ಹೆರ್ಗ ಹರಿಪ್ರಸಾದ್ ಉಪಸ್ಥಿತರಿದ್ದರು.
ಧಾನ್ಯ ಮುಹೂರ್ತದ ಧಾರ್ಮಿಕ ವಿಧಿ ವಿಧಾನವು ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ನಡೆಯಿತು. ಮಧ್ವ ಸರೋವರದ ಬಳಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ ಶಿಖರ ಇಡಲಾಯಿತು.
ಧಾನ್ಯ ಮುಹೂರ್ತ‌ ಸಂದರ್ಭ ಈ ಬಾರಿ ಪುತ್ತಿಗೆ ಹಿರಿಯ‌ ಶ್ರೀಗಳು ವಿಶೇಷವಾಗಿ ಉಪಸ್ಥಿತರಿದ್ದರು‌.

ಏನಿದು ಧಾನ್ಯ ಮುಹೂರ್ತ?: 2024, ಜ.18ರಿಂದ ಎರಡು ವರ್ಷಗಳ ಕಾಲ ನಡೆವ ಪುತ್ತಿಗೆ ಪರ್ಯಾಯಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಿಟ್ಟಿನಲ್ಲಿ ಧಾನ್ಯ ಸಂಗ್ರಹವೇ ಧಾನ್ಯ ಮುಹೂರ್ತದ ಹಿಂದಿರುವ‌ ವೈಶಿಷ್ಟ್ಯವಾಗಿದೆ.

ಪೂಜೆ ಜತೆಗಿರಲಿ ಭಗವಂತನ ಆಂತರಿಕ‌ ಚಿಂತನೆ: ಪುತ್ತಿಗೆ ಶ್ರೀ

ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ‌ ಧಾರ್ಮಿಕ ಸಭೆಯಲ್ಲಿ ಪೂಜ್ಯ ಶ್ರೀಪಾದರು ದೇವರಿಗೆ ಪೂಜೆ, ದೀಪ, ಧೂಪ, ನೈವೇದ್ಯ ಸಮರ್ಪಣೆ ಹೊರತಾಗಿ ಪ್ರತಿಯೊಬ್ಬರೂ ಆಂತರಿಕವಾಗಿ ಭಗವದ್ ಚಿಂತನೆ ನಡೆಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಹೇಳಿದ್ದಾರೆ. ಅವರು ಪುತ್ತಿಗೆ ಮಠದ ಸಭಾಂಗಣದಲ್ಲಿ ಪರ್ಯಾಯ ಪೂರ್ವಭಾವಿ‌ ಧಾನ್ಯ ಮುಹೂರ್ತದಂಗವಾಗಿ ನಡೆದ‌ ಧಾರ್ಮಿಕ ಸಭೆಯಲ್ಲಿ ಬುಧವಾರ ಆಶೀರ್ವಚನ ನೀಡಿದರು. ಈ ಬಾರಿಯದ್ದು ವಿಶ್ವ ಗೀತಾ ಪರ್ಯಾಯ ಎಂದು ಘೋಷಿಸಿದ ಶ್ರೀಗಳು, ದೇವರ ಪೂಜೆಯ ಸಂಕಲ್ಪ, ಪೂರ್ಣತೆ ನಡುವೆ ಒಂದೊಂದು ಫಲವಿದೆ. ಪ್ರತಿಯೊಬ್ಬರಿಗೂ‌ ದೇವರ ಪೂಜೆ, ಅನುಗ್ರಹದ ಅಪೇಕ್ಷೆಯಿದ್ದರೂ ಜಗತ್ತಿಗೆ ಭಗವಂತನ ಅನುಗ್ರಹದ ಫಂಡ್ ಬಂದರೆ ಎಲ್ಲವೂ ಸುಲಲಿತ ಎಂದರು.

ಮನುಷ್ಯ ಯತ್ನದ ಜತೆಗೆ ದೇವರ ಅನುಗ್ರಹ ಬೇಕು. ವೈಯಕ್ತಿಕಕ್ಕಿಂತ ಜಗದ ಶ್ರೇಯಸ್ಸಿನ ಪೂಜೆಯೇ ಪರ್ಯಾಯ. ಒಂದು ಕೋಟಿ ಜನರಿಂದ ಭಗವದ್ಗೀತೆ‌ ಬರೆಸುವ‌ ಸಂಕಲ್ಪ ನಮ್ಮದು,
ಅದನ್ನು ಈಡೇರಿಸಲು‌ ಶ್ರೀಕೃಷ್ಣನಿದ್ದಾನೆ. ಜಗತ್ತಿನ ಮೂಲೆ ಮೂಲೆಯಲ್ಲೂ ಗೀತಾ ಪ್ರಚಾರವಾಗಿದೆ. ಪರ್ಯಾಯದಲ್ಲಿ‌ ದೇವರ ಸೇವೆ ಜತೆಗೆ ಭಕ್ತರ ಸೇವೆಯ ಅವಕಾಶ ಉಡುಪಿ ಜನರಿಗಿದೆ. ಜೀವನ ಕ್ಷಣಿಕ, ಹೀಗಾಗಿ ಅಮೆರಿಕದಲ್ಲಿ ತೆರೆದಿಟ್ಟ ಅಂಗಡಿಗಳನ್ನು ಬ್ಲ್ಯಾಕ್ ಫ್ರೈಡೇ ದಿನ ಸೂರೆ ಮಾಡುವಂತೆ (ಪರ್ಯಾಯ ಪೀಠದಿಂದ ಇಳಿವ ಮಠದ ಕೊನೆಯ ದಿನವೂ ಸೂರೆ ಸಂಪ್ರದಾಯವಿದೆ) ಹೀಗಾಗಿ ದೇವರ ಸೇವೆಯ‌ ಅವಕಾಶವನ್ನು ಒಂದಿನಿತೂ ಬಿಡದೆ ಬಾಚಿಕೊಳ್ಳಬೇಕು ಎಂದರು.

ಪರ್ಯಾಯ‌‌ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಪೌರಾಯುಕ್ತ ರಾಯಪ್ಪ, ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಶ್ರೀರಮಣ ಉಪಾಧ್ಯ, ಸೂರ್ಯನಾರಾಯಣ ಉಪಾಧ್ಯ ಕುಂಭಾಶಿ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಉಪಸ್ಥಿತರಿದ್ದರು. ಡಾ.ಉಷಾ ಪಲ್ಲವಿ ಬಲ್ಲಾಳ್ ಪ್ರಾರ್ಥಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ಪರ್ಯಾಯ‌ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ರಮೇಶ್ ಭಟ್ ಕೆ.‌ ನಿರೂಪಿಸಿದರು.ಬೆಳಪು ದೇವಿಪ್ರಸಾದ್ ಶೆಟ್ಟಿ‌ ವಂದಿಸಿದರು. ಡಾ.ಅರ್ಚನಾ ನಂದ ಕುಮಾರ್ ರಚಿತ ಕೃತಿಯನ್ನು ಯೂಟ್ಯೂಬ್ ಮೂಲಕ ಶ್ರೀಪಾದರು ಬಿಡುಗಡೆ ಮಾಡಿದರು.

ಅತಿಥಿಗಳಿಗೆ ಮನೆ ಆತಿಥ್ಯ: ಸ್ವಾಗತ‌ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಹಿಂದೂ‌ಸಂಸ್ಕೃತಿ, ಮಾಧ್ವ ಪರಂಪರೆಯ‌ ಪ್ರಚಾರದೊಂದಿಗೆ ವಿದೇಶದಲ್ಲಿ 15 ಕೃಷ್ಣ ಮಂದಿರ ಸ್ಥಾಪನೆ ಹಿನ್ನೆಲೆಯಲ್ಲಿ ಪುತ್ತಿಗೆ ಪರ್ಯಾಯ‌ ವಿಶ್ವ ಪರ್ಯಾಯ. ಪರ್ಯಾಯವೇರುವ ಮೊದಲು ತೀರ್ಥಸ್ನಾನ ಕೈಗೊಳ್ಳುವ ಕಾಪು ದಂಡತೀರ್ಥದಿಂದ ತೊಡಗಿ ವಿದ್ಯುದಲಂಕಾರ, ನಗರಾಲಂಕಾರಕ್ಕೆ ಸಿದ್ಧತೆ ನಡೆದಿದೆ. ನಗರದ 10 ಕಿ.ಮೀ. ವ್ಯಾಪ್ತಿಯ ಮನೆಮಂದಿ ಒಂದಿಬ್ಬರು ಅತಿಥಿಗಳಿಗೆ ಆತಿಥ್ಯದ ಹೊಣೆ ಹೊರಲು ಹೆಸರು ನೋಂದಾಯಿಸಬಹುದು ಎಂದರು.

2008ರಂತೆ 2024 ರಲ್ಲೂ ಡಿಸಿಯಿಂದ ಪೌರ ಸನ್ಮಾನ: 2008 ರಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ‌ ಶ್ರೀಪಾದರು ಪರ್ಯಾಯ ಪೀಠವೇರುವ ಮೊದಲು ನಗರಸಭೆ ಪೌರ ಸನ್ಮಾನವನ್ನು ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ನೆರವೇರಿಸಿದ್ದರೆ ಈ ಬಾರಿಯೂ ಜ.8ರಂದು ಶ್ರೀಗಳ ಪುರಪ್ರವೇಶ ಬಳಿಕದ ಪೌರ ಸನ್ಮಾನವೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ(ಚುನಾಯಿತ ಸದಸ್ಯರಿದ್ದರೂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಮೀಸಲು ಬಾರದ ಹಿನ್ನೆಲೆಯಲ್ಲಿ ಈ ಬಾರಿಯೂ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿದ್ದಾರೆ)

ಶ್ರೀಕೃಷ್ಣನಿಗೆ ನವಧಾನ್ಯ ಸಮರ್ಪಣೆ: ಧಾನ್ಯ ಮುಡಿಗಳ ನಡುವೆ ಪೀಠಾಸೀನರಾಗಿದ್ದ ಪುತ್ತಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ನವಗ್ರಹ ಚಿಂತನೆಯಿಂದ ಅತಿಥಿಗಳು ತಟ್ಟೆಗೆ ನವ ಧಾನ್ಯ ಸಮರ್ಪಿಸಿ ನವಗ್ರಹ‌ಚಿಂತನೆಯೊಂದಿಗೆ ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀಧರ ಉಪಾಧ್ಯ ನವಗ್ರಹ‌ಸ್ತೋತ್ರ ಪಠಿಸಿದರು.

ವೈಶಿಷ್ಟ್ಯಪೂರ್ಣ ಆಹ್ವಾನ ಪತ್ರಿಕೆ ಬಿಡುಗಡೆ: ಪುತ್ತಿಗೆ ಪರ್ಯಾಯ 2024- 2026 ಆಹ್ವಾನ ಪತ್ರಿಕೆ ಪುತ್ತಿಗೆ ಶ್ರೀಗಳ‌ ವಿಶೇಷ ಮುತುವರ್ಜಿಯಿಂದ ವಿಶಿಷ್ಟವಾಗಿ ರೂಪುಗೊಂಡಿದ್ದು ಬಿಡುಗಡೆ ಮಾಡಲಾಯಿತು. ಶ್ರೀಕೃಷ್ಣನ ಅನುಗ್ರಹ ಪತ್ರವಾಗಿ ಒಂದು ಲಕ್ಷ ಜನರಿಗೆ ಆಹ್ವಾನ ಪತ್ರ ತಲುಪಿಸುವ ಗುರಿಯಿದೆ ಎಂದು ಶ್ರೀಗಳು ನುಡಿದರು. ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಳದ‌ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ‌ ಭಟ್ ಅವರಿಗೆ ಹೊರೆ ಕಾಣಿಕೆ ಸಮರ್ಪಣೆ‌ ಬ್ಯಾನರ್ ಹಸ್ತಾಂತರಿಸಲಾಯಿತು.

ಸಂಸ್ಕೃತಿ, ಸಂಸ್ಕಾರ ಉಳಿಸಿ: ಡಾ.ಹೆಗ್ಗಡೆ ಶ್ರೀಕೃಷ್ಣ ಬೋಧಿಸಿದ ಗೀತಾ‌ಸಾರವನ್ನು ಜಗತ್ತಿಗೆ ಉಣಿಸಿ ಧರ್ಮ, ಸಂಸ್ಕೃತಿ, ಸಂಸ್ಕಾರದ ಉಳಿವಿಗೆ ಆದ್ಯ ಗಮನ ಅಗತ್ಯ ಎಂದು ರಾಜರ್ಷಿ ‌ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಪರ್ಯಾಯ‌ ಸಂಸ್ಕಾರ ವಿದ್ಯಾರ್ಥ, ಯುವಜನರಿಗೆ ತಲುಪಬೇಕು. ಭಗವಂತನ ಸೇವೆಯಿಂದ ಸಂತೃಪ್ತಿ ಪಡೆಯಬೇಕು.ಹೊರೆಕಾಣಿಕೆ ವರ್ಷಕ್ಕಾಗುವಷ್ಟು ಸಂಗ್ರಹವಾಗಲಿ. ಪರ್ಯಾಯ ನದಿಯಲ್ಲಿ ನಾವೆಲ್ಲರೂ ಮಿಂದು ಪುನೀತರಾಗೋಣ.ದೇಶ, ಜಗತ್ತಿಗೆ‌ ಸುಭಿಕ್ಷೆಯಾಗಲಿ.‌ ವಿದೇಶಕ್ಕೆ ಹೋಗಿದ್ದಾಗ ಕೃಷ್ಣ ಮಂದಿರದಲ್ಲಿ ಇಂಗ್ಲೀಷ್‌ ಸತ್ಯನಾರಾಯಣ‌ ಪೂಜೆ ಮೂಲಕ ಧಾರ್ಮಿಕತೆಯ ಪ್ರಸಾರ ಖುಷಿ ಕೊಟ್ಟಿತು ಎಂದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!