ಉಡುಪಿ, ನ.30: ಕಾರ್ಕಳ ತಾಲೂಕಿನ ಕಲ್ಯಾ ಶಾಲೆಯ ಶತಮಾನೋತ್ಸವ ಸಮಿತಿ ನಿರ್ಮಾಣ ಮಾಡಲಿರುವ ಹುತಾತ್ಮ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸ್ಮಾರಕವು ನಾಡಿಗೆ ಮಾದರಿ ಆಗಲಿ. ಅದು ಇಡೀ ಗ್ರಾಮದ ಜನತೆಯ ರಾಷ್ಟ್ರಪ್ರೇಮಕ್ಕೆ ಪೂರಕವಾಗಿ ನಿಲ್ಲಲಿ ಎಂದು ಶಾಸಕ ವಿ ಸುನೀಲ್ ಕುಮಾರ್ ಹೇಳಿದರು. ತಾಲೂಕಿನ ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಹುತಾತ್ಮ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮುಂದೆ ಕಾರ್ಕಳದಲ್ಲಿ ಸೈನಿಕ ಶಾಲೆ ನಿರ್ಮಿಸುವ ಯೋಜನೆ ಇದ್ದು ಅದು ಕೂಡ ಈ ಪ್ರದೇಶದಲ್ಲಿ ಇನ್ನಷ್ಟು ಸೈನಿಕರನ್ನು ರಾಷ್ಟ್ರಕ್ಕೆ ನೀಡಲು ಪ್ರೆರಕವಾಗುತ್ತದೆ ಎಂದರು.
ಇಬ್ಬರು ನಿವೃತ್ತ ಸೈನಿಕರಾದ ಸುಬೇದಾರ್ ವಿಜಯ್ ಫೆರ್ನಾಂಡಿಸ್ ಮತ್ತು ರಾಧಾಕೃಷ್ಣ ಭಟ್ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸುಬೇದಾರ್ ವಿಜಯ್ ಫೆರ್ನಾಂಡಿಸ್ ಮಾತನಾಡಿ, ಸೈನಿಕರಾಗುವುದು ಒಂದು ಅದ್ಭುತ ಅವಕಾಶ. ಸೈನಿಕ ದೇಶದ ಬಹುದೊಡ್ಡ ಆಸ್ತಿ. ಯುದ್ಧಭೂಮಿಯಲ್ಲಿ ಭಾರತಕ್ಕಾಗಿ ಬಲಿದಾನ ಮಾಡಲು ಪ್ರತೀ ಒಬ್ಬ ಸೈನಿಕನು ತವಕಿಸುತ್ತಾನೆ ಎಂದು ಹೇಳಿದರು. ಇನ್ನೊಬ್ಬ ನಿವೃತ್ತ ಸೈನಿಕ ರಾಧಾಕೃಷ್ಣ ಭಟ್ ಅವರು ಸೈನಿಕರ ಮಹತ್ವವನ್ನು ವಿವರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಆಶಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ, ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರವಿದಾಸ್ ಕುಡ್ವ, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಮತ್ತು ವಿವಿಧ ಸಮಿತಿಗಳ ಸಂಚಾಲಕರು ಮತ್ತು ಗ್ರಾಮಸ್ಥರು ಇದ್ದರು. ರಾಜೇಂದ್ರ ಭಟ್ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಚಿತ್ ಕೋಟ್ಯಾನ್ ದೇಶಭಕ್ತಿ ಗೀತೆ ಹಾಡಿದರು. ಸುಧಾಕರ್ ಶೆಣೈ ವಂದಿಸಿದರು.