ಕಾರ್ಕಳ, ನ.29: ವಿದ್ಯಾರ್ಥಿಗಳಲ್ಲಿ ಪರಿಶ್ರಮ ಹಾಗೂ ಶ್ರದ್ಧೆಯಿದ್ದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಜ್ಞಾನಸುಧಾ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಮುಂದಿನ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜ್ಞಾನ ಸಂಭ್ರಮ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ನಾಡಿನ ಮನೆ ಮಾತಾಗಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಘಟಿತ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸ್ಟೇಟ್ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರರ‍್ಸ್ ಮಾಲಕರ ಸಂಘದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಇವರು ಮಾತನಾಡಿ, ಸಂಸ್ಕಾರಯುತ ಶಿಕ್ಷಣದ ಮೂಲಕ ಸಮಾಜಕ್ಕೆ ಮೌಲ್ಯಯುತ ಗುಣಸಂಪನ್ನ ವಿದ್ಯಾರ್ಥಿಗಳನ್ನು ನೀಡುತ್ತಿರುವ ಜ್ಞಾನಸುಧಾದ ಕಾರ್ಯ ಪ್ರಶಂಸನೀಯ ಎಂದರು. ಪರಸ್ಪರ ಗೌರವವನ್ನು ಇಟ್ಟುಕೊಂಡು ದುಡಿಯುತ್ತಿರುವ ಜ್ಞಾನಸುಧಾ ಬಳಗ ಹಾಗೂ ವಿದ್ಯಾರ್ಥಿಗಳ ಉನ್ನತಿಯೇ ನಮ್ಮ ಯಶಸ್ಸಾಗಿದೆ. ವಿದ್ಯಾರ್ಥಿಗಳು ದೇಶಧರ್ಮದ ಕಳಕಳಿಯನ್ನು ಇಟ್ಟುಕೊಂಡು ಸಂಶೋಧಿತರಾಗಿ, ಮೌಲ್ಯಯುತರಾಗಿ ಸಮಾಜದ ಮುಂದೆ ಬೆಳೆದು ನಿಂತಾಗ ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯ ಸಾರ್ಥಕ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿಪ್ರಾಯ ಪಟ್ಟರು. ಹುತಾತ್ಮರಾದ ವೀರಯೋಧ ಕ್ಯಾ. ಎಂ.ವಿ. ಪ್ರಾಂಜಲ್‌ರವರಿಗೆ ನುಡಿನಮನ ಅರ್ಪಿಸಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ಸ್ವಾಗತಿಸಿ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಸಿರಿ ಎಚ್.ಡಿ. ಪ್ರಾರ್ಥಿಸಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ ಸಂಯೋಜಕ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಸಂದೀಪ, ಹಿಂದಿ ವಿಭಾಗದ ಮುಖ್ಯಸ್ಥೆ ಯಶೋಧಾ ಚೌಹಾನ್ ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಕ ಶರತ್ ಆರ್ ವಾಚಿಸಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ವಿದ್ಯಾರ್ಥಿ ನಾಯಕ ಚಿರಂತನ ಜೆ.ಎ. ಹಾಗೂ ವಿದ್ಯಾರ್ಥಿ ನಾಯಕಿ ಸಂಜನಾ ಪಟಗಾರ್ ಉಪಸ್ಥಿತರಿದ್ದರು.