ಉಡುಪಿ, ನ.23: ಕರ್ನಾಟಕ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿ ಹಾಗೂ ಅವುಗಳ ಸಿ.ಡಿ.ಯನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷದವರಿಗೆ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ, ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಯ ಕಚೇರಿ ಸೂಚನಾ ಫಲಕಗಳಲ್ಲಿ ಪ್ರಚಾರ ಪಡಿಸಲಾಗಿದೆ ಎಂದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಸೆಪ್ಟಂಬರ್ 30 ರಿಂದ ನವೆಂಬರ್ 6 ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದರು. ಪದವೀಧರರ ಕ್ಷೇತ್ರಕ್ಕೆ ಒಟ್ಟು 16,478 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2402 ಬೇರೆ ಜಿಲ್ಲೆಗೆ ವರ್ಗಾವಣೆಯಾಗಿ, 95 ತಿರಸ್ಕೃತಗೊಂಡು, ಜಿಲ್ಲೆಯಲ್ಲಿ 13981 ಅಧಿಕೃತವಾಗಿ ನೋಂದಣಿಯಾಗಿವೆ. ಶಿಕ್ಷಕರ ಕ್ಷೇತ್ರಕ್ಕೆ 3014 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 337 ಇತರೆ ಜಿಲ್ಲೆಗೆ ವರ್ಗಾವಣೆಯಾಗಿ, 45 ತಿರಸ್ಕೃತಗೊಂಡು 2677 ಮತದಾರರ ಹೆಸರು ನೋಂದಣಿಯಾಗಿರುತ್ತದೆ ಎಂದರು.
ನವೆಂಬರ್ 23 ರಿಂದ ಡಿಸೆಂಬರ್ 9 ರ ವರೆಗೆ ಈ ಮತದಾರರ ಪಟ್ಟಿಗೆ ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, ಬಂದಂತಹ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ 25 ರಂದು ವಿಲೇವಾರಿ ಮಾಡುವುದರೊಂದಿಗೆ ಅಂತಿಮ ಮತದಾರರ ಪಟ್ಟಿಯನ್ನು ಇದೇ ಡಿಸೆಂಬರ್ 30 ರಂದು ಪ್ರಕಟಿಸಲಾಗುವುದು ಎಂದರು. ಈಗಲೂ ಭಾರತೀಯ ಪ್ರಜೆಯಾಗಿ ಸಾಮಾನ್ಯವಾಗಿ ವಾಸಿಸುವ ಇದೇ ನವೆಂಬರ್ 1 ಕ್ಕೆ ಮುಂಚೆ ಕನಿಷ್ಠ 3 ವರ್ಷಗಳ ಮೊದಲು ದೇಶದ ವಿಶ್ವ ವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೆಸರನ್ನು ಪದವೀದರರ ಮತದಾರರ ಪಟ್ಟಿಗೆ ಹಾಗೂ ಚುನಾವಣಾ ಕ್ಷೇತ್ರದ ಸಾಮಾನ್ಯ ಕ್ಷೇತ್ರದಲ್ಲಿ ನಿವಾಸಿಯಾಗಿರುವ ಇದೇ ನವೆಂಬರ್ 1 ಕ್ಕೆ ಹಿಂದಿನ 6 ವರ್ಷಗಳಲ್ಲಿ 3 ವರ್ಷವಾದರೂ ರಾಜ್ಯ ಸರಕಾರದ ನಿರ್ಧಿಷ್ಟ ಪಡಿಸಿದ ಪ್ರೌಡಶಾಲೆ ಹಾಗೂ ಅದಕ್ಕಿಂತ ಮೇಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಭೋಧನೆಯಲ್ಲಿ ತೊಡಗಿರುವ ಶಿಕ್ಷಕರು ತಮ್ಮ ಹೆಸರಸನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳೀಸಲು ಅವಕಾಶ ಇರುತ್ತದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ವಿವಿಧ ಪಕ್ಷದವರಾದ ಕಾಂಗ್ರೇಸ್‌ನ ಹಬೀಬ್ ಅಲಿ ಹಾಗೂ ಶೃದೀಪ, ಬಿ.ಜೆ.ಪಿಯ ಚಂದ್ರಶೇಖರ ಪ್ರಭು, ಜೆ.ಡಿ.ಎಸ್ ನ ಜಯ ಕುಮಾರ್ ಪರ್ಕಳ, ಸಿ.ಪಿ.ಐ.ಎಂ ನ ಮನೋಹರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.